ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಆರ್ಬಿಐ ಮತ್ತೊಮ್ಮೆ ರೆಪೊ ದರ ಹೆಚ್ಚಿಸಿದೆ. ಈ ಬಾರಿ ಆರ್ಬಿಐ 50 ಮೂಲಾಂಕ (ಬೇಸಿಸ್ ಪಾಯಿಂಟ್) ಅಥವಾ ಶೇ 0.50 ರಷ್ಟು ರೆಪೊ ಏರಿಕೆ ಮಾಡಿದೆ. ಈ ಹೆಚ್ಚಳದೊಂದಿಗೆ ರೆಪೊ ದರ ಶೇ 5.90ಗೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಹಣದುಬ್ಬರ ಆರ್ಬಿಐನ ಮಿತಿ ಮೀರಿ ಹೆಚ್ಚಾಗುತ್ತಿದೆ. ಈಗ ದೇಶದಲ್ಲಿ ಶೇ 7 ರಷ್ಟು ಹಣದುಬ್ಬರ ಇರುವುದು ಗಮನಾರ್ಹ. ಹೀಗಾಗಿ ಹಣದುಬ್ಬರ ನಿಯಂತ್ರಿಸಲು ಆರ್ಬಿಐ ಇದೊಂದೇ ವರ್ಷದಲ್ಲಿ ನಾಲ್ಕು ಬಾರಿ ರೆಪೊ ದರ ಹೆಚ್ಚಿಸಿದೆ.
50 ಮೂಲಾಂಕದಷ್ಟು ರೆಪೊ ದರ ಏರಿಕೆಯಿಂದ ಖಂಡಿತವಾಗಿಯೂ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮವಾಗಲಿದೆ. ಇನ್ನು ಮುಂದೆ ಬ್ಯಾಂಕ್‌ಗಳು ಆರ್ಬಿಐನಿಂದ ಪಡೆಯುವ ಸಾಲದ ಬಡ್ಡಿದರ ಹೆಚ್ಚಾಗುತ್ತದೆ. ಆದರೆ ಬ್ಯಾಂಕ್‌ಗಳು ಇದನ್ನು ತಾವು ಭರಿಸುವುದಿಲ್ಲ, ಹೀಗೆ ಹೆಚ್ಚಿನ ಬಡ್ಡಿದರದ ಭಾರವನ್ನು ಅವು ಗ್ರಾಹಕರಿಗೆ ವರ್ಗಾಯಿಸುತ್ತವೆ. ಇದರಿಂದ ಕಾರ್ ಲೋನ್, ಹೋಮ್ ಲೋನ್ ಸೇರಿದಂತೆ ಇನ್ನೂ ಹಲವಾರು ರೀತಿಯ ಸಾಲಗಳು ತುಟ್ಟಿಯಾಗಲಿವೆ. ಆದರೆ ರೆಪೊ ದರ ಏರಿಕೆಯಿಂದ ಒಂದು ಕಡೆ ಲಾಭವೂ ಆಗಲಿದೆ. ಬ್ಯಾಂಕ್ಗಳಲ್ಲಿ ಹಣ ಎಫ್‌ಡಿ ಮಾಡುವ ಜನರಿಗೆ ಹೆಚ್ಚು ಬಡ್ಡಿದರ ಸಿಗುವುದು ಖುಷಿಯ ವಿಚಾರ.
ಎಫ್‌ಡಿ ಬಡ್ಡಿದರದಲ್ಲಿ ಬದಲಾವಣೆ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿರುವ ಪರಿಣಾಮ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲೂ ಆಗಲಿದೆ. ತಮ್ಮ ಸಾಲಗಳ ಬಡ್ಡಿದರಗಳನ್ನು ಹೆಚ್ಚಿಸುವುದರ ಜೊತೆಗೆ, ಬ್ಯಾಂಕುಗಳು ಎಫ್‌ಡಿ ಗಳ ಬಡ್ಡಿದರಗಳನ್ನು ಸಹ ಹೆಚ್ಚಿಸುತ್ತವೆ. ರಿಸರ್ವ್ ಬ್ಯಾಂಕ್ ಆಗಸ್ಟ್‌ನಲ್ಲಿ ರೆಪೊ ದರವನ್ನು ಹೆಚ್ಚಿಸಿದ ನಂತರ ಬಹುತೇಕ ಎಲ್ಲಾ ಬ್ಯಾಂಕ್‌ಗಳು ತಮ್ಮ ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸಿವೆ. ಈಗ ಮತ್ತೊಮ್ಮೆ ರೆಪೋ ದರ ಹೆಚ್ಚಳದಿಂದ ಎಫ್‌ಡಿ ಬಡ್ಡಿ ದರಗಳು ಮತ್ತಷ್ಟು ಹೆಚ್ಚಾಗಲಿವೆ.