ಕರ್ನಾಟಕ

karnataka

ETV Bharat / bharat

ಖ್ಯಾತ ಉರ್ದು ಕವಿ ಮುನವ್ವರ್​ ರಾಣಾ ನಿಧನ - ಖ್ಯಾತ ಉರ್ದು ಕವಿ

ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉರ್ದು ಕವಿ ಮುನವ್ವರ್​ ರಾಣಾ ತಮ್ಮ 71ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Renowned Urdu poet Munawwar Rana passed away
ಖ್ಯಾತ ಉರ್ದು ಕವಿ ಮುನವ್ವರ್​ ರಾಣಾ ನಿಧನ

By ETV Bharat Karnataka Team

Published : Jan 15, 2024, 10:30 AM IST

ಲಕ್ನೋ:ಖ್ಯಾತ ಉರ್ದು ಕವಿ ಮುನವ್ವರ್​ ರಾಣಾ ಭಾನುವಾರ ತಡರಾತ್ರಿ ಲಕ್ನೋದ ಪಿಜಿಐ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕೆಲವು ತಿಂಗಳುಗಳಿಂದ ಹೃದಯ ಹಾಗೂ ಕಿಡ್ನಿ ಸಂಬಂಧಿತ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದ ಇವರು ಲಕ್ನೋದ ಪಿಜಿಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜನವರಿ 9ರಂದು ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಐಸಿಯುಗೆ ದಾಖಲಿಸಲಾಗಿತ್ತು.

1952 ನವೆಂಬರ್​ 26ರಂದು ರಾಯ್​ ಬರೇಲಿಯಲ್ಲಿ ಜನಿಸಿದ ರಾಣಾ ಅವರು ಉರ್ದು ಮಾತ್ರವಲ್ಲದೆ ಹಿಂದಿ ಹಾಗೂ ಅವಧಿ ಭಾಷೆಗಳನ್ನು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಉರ್ದು ಸಾಹಿತ್ಯ ಮತ್ತು ಗಜಲ್​ಗಳಿಗೆ ರಾಣಾ ವಿಶೇಷ ಕೊಡುಗೆ ನೀಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದ ರಾಣಾ ಆಗಾಗ್ಗೆ ಸುದ್ದಿಯಾಗುತ್ತಿದ್ದರು. 2014ರಲ್ಲಿ ಇವರ 'ಶಹದಾಬಾ' ಉರ್ದು ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 2012ರಲ್ಲಿ ಶಹೀದ್​ ಶೋಧ್​ ಸಂಸ್ಥಾನದಿಂದ ಮಾತಿ ರತನ್ ಸಮ್ಮಾನ್​ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ ಅವರು ಸುಮಾರು ಒಂದು ವರ್ಷದ ನಂತರ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು ಎಂದಿಗೂ ಸರ್ಕಾರಿ ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಉತ್ತರ ಪ್ರದೇಶದಲ್ಲಿ ಜನಿಸಿದರೂ ರಾಣಾ ತಮ್ಮ ಜೀವನದ ಬಹುಭಾಗವನ್ನು ಕೊಲ್ಕತ್ತಾದಲ್ಲೇ ಕಳೆದಿದ್ದರು. ಸಾಹಿತ್ಯ ಕ್ಷೇತ್ರದ ಇವರ ಸಾಧನೆಗಾಗಿ 'ಅಮೀರ್​ ಖುಸ್ರೋ ಪ್ರಶಸ್ತಿ' 'ಮಿರ್​ ತಾಕಿ ಮಿರ್​ ಪ್ರಶಸ್ತಿ' 'ಗಾಲಿಬ್​ ಪ್ರಶಸ್ತಿ' 'ಜಾಕಿರ್​ ಹುಸೇನ್​ ಪ್ರಶಸ್ತಿ' ಹಾಗೂ 'ಸರಸ್ವತಿ ಸಮಾಜ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. ರಾಣಾ ತಮ್ಮ ತಾಯಿಯ ಮೇಲೆ ಅನೇಕ ಕೃತಿಗಳನ್ನು ಬರೆದಿದ್ದರು.

ಈ ಹಿಂದೆ 'ಈಟಿವಿ ಭಾರತ'ಕ್ಕೆ ನೀಡಿದ್ದ ಸಂದರ್ಶನದಲ್ಲಿ, "ದೇಶದಲ್ಲಿ ಪ್ರತಿಪಕ್ಷಗಳ ಬೆನ್ನೆಲುಬು ಮುರಿದಿದೆ. ಅಧಿಕಾರದಲ್ಲಿರುವವರು ಧರ್ಮಗಳನ್ನು ಒಡೆದು ಮಾತನಾಡುತ್ತಿದ್ದಾರೆ. ದೇಶದಲ್ಲಿ ಅನೇಕರು ನಾಥುರಾಮ್​ ಗೋಡ್ಸೆ ಅವರ ಆಲೋಚನೆಗಳಿಂದ ಪ್ರಭಾವಿತರಾಗಿದ್ದಾರೆ. ಮಹಾತ್ಮ ಗಾಂಧಿಯ ಅನುಯಾಯಿಗಳ ಸಂಖ್ಯೆ ಕಡಿಮೆಯಾಗಿದೆ" ಎಂದು ಹೇಳಿದ್ದರು. 2020ರಲ್ಲಿ ಪ್ರವಾದಿ ಮುಹಮ್ಮದ್​ ಕುರಿತ ಕಾರ್ಟೂನ್​ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಫ್ರಾನ್ಸ್​ನಲ್ಲಿ ಶಾಲಾ ಶಿಕ್ಷಕ ಸ್ಯಾಮ್ಯುಯೆಲ್​ನ ಹತ್ಯೆಯನ್ನು ಮುನವ್ವರ್​ ಸಮರ್ಥಿಸಿಕೊಂಡಿದ್ದರು. ಆ ಬಗ್ಗೆ ಅವರು ನೀಡಿದ್ದ ಹೇಳಿಕೆ ಆಕ್ರೋಶಕ್ಕೆ ಕಾರಣವಾದ ಕಾರಣ, ನಂತರದಲ್ಲಿ ಸ್ಪಷ್ಟೀಕರಣ ನೀಡುವಂತಾಗಿತ್ತು. ಆಗ "ಜನರು ಸತ್ಯವನ್ನು ಇಷ್ಟಪಡುವುದಿಲ್ಲ. ಹಾಗೇನಾದರೂ ಇಷ್ಟಪಡುತ್ತಿದ್ದರೆ ಯೇಸುವನ್ನು ಶಿಲುಬೆಗೇರಿಸುತ್ತಿರಲಿಲ್ಲ. ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲುತ್ತಿರಲಿಲ್ಲ" ಎಂದು ಹೇಳಿದ್ದರು.

ಮುನವ್ವರ್​ ರಾಣಾ ಅಂತಿಮ ಸಂಸ್ಕಾರ ಸೋಮವಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುನವ್ವರ್​ ಅವರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪುತ್ರಿ ಸುಮಯ್ಯಾ ಅವರು ಅಖಿಲೇಶ್​ ಯಾದವ್​ ನೇತೃತ್ವದ ಸಮಾಜವಾದಿ ಪಕ್ಷದ ಸದಸ್ಯೆಯಾಗಿದ್ದಾರೆ.

ಇದನ್ನೂ ಓದಿ:ಪ್ರಾಸ್ಟೇಟ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಗಾಯಕ ಉಸ್ತಾದ್ ರಶೀದ್ ಖಾನ್ ನಿಧನ

ABOUT THE AUTHOR

...view details