ರಾಯಗಡ (ಒಡಿಶಾ): ಖ್ಯಾತ ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ (88) ಅವರು ನಿನ್ನೆ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಎದೆನೋವು ಕಾಣಿಸಿಕೊಂಡು ಪ್ರಜ್ಞಾಹೀನರಾಗಿ ಶಾಂತಿ ದೇವಿ ನಿನ್ನೆ ಕುಸಿದು ಬಿದ್ದಿದ್ದಾರೆ. ಮನೆಗೆ ಬಂದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 18, 1934 ರಂದು ಬಾಲಸೋರ್‌ನಲ್ಲಿ ಜನಿಸಿದ ಶಾಂತಿ ದೇವಿ ಅವರು 17ನೇ ವಯಸ್ಸಿಗೆ ಡಾ. ರತನ್ ದಾಸ್ರನ್ನು ವಿವಾಹವಾಗಿ ಪತಿಯ ಬೆಂಬಲದೊಂದಿಗೆ ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
ಶಾಂತಿ ದೇವಿಯವರು ಮುಖ್ಯವಾಗಿ ಬುಡಕಟ್ಟು ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ಶ್ರಮಿಸಿದರು. ರಾಯಗಡ ಜಿಲ್ಲೆಯ ಪದ್ಮಾಪುರ ಬ್ಲಾಕ್‌ನ ಜಬರ್‌ಗುಡದಲ್ಲಿ ಕುಷ್ಠ ರೋಗಿಗಳಿಗಾಗಿ ಆಶ್ರಮ ಸ್ಥಾಪಿಸಿದ್ದರು. ಹಲವಾರು ಗಾಂಧಿವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು. ಇವರ ಸಮಾಜ ಸೇವೆಗೆ ಪದ್ಮಶ್ರೀ ಪ್ರಶಸ್ತಿ, ಜಮುನಾಲಾಲ್ ಬಜಾಜ್ ಪ್ರಶಸ್ತಿ, ರಾಧಾನಾಥ್ ರಥ್ ಶಾಂತಿ ಪ್ರಶಸ್ತಿ ಸೇರಿ ಅನೇಕ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ:29 ಮರಿಗಳಿಗೆ ಜನ್ಮ ನೀಡಿದ್ದ 'ಸೂಪರ್‌ಮಾಮ್' ಇನ್ನಿಲ್ಲ..
ಪ್ರಧಾನಿ ನರೇಂದ್ರ ಮೋದಿ ಕೂಡ ಇವರನ್ನು ಭೇಟಿಯಾದ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಅಗಲಿಕೆಗೆ ಸಂತಾಪ ಸೂಚಿದ್ದಾರೆ.