ನವದೆಹಲಿ: ದೂರದರ್ಶನದಲ್ಲಿ ಮೊದಲ ಮಹಿಳಾ ಇಂಗ್ಲಿಷ್ ಸುದ್ಧಿ ನಿರೂಪಕಿಯಾಗಿ 30 ವರ್ಷಗಳ ಕಾಲ ತಮ್ಮ ವಿಶೇಷವಾದ ಕಂಠದಿಂದಲೇ ಪ್ರಸಿದ್ಧಿ ಪಡೆದಿದ್ದ ಗೀತಾಂಜಲಿ ಅಯ್ಯರ್ (71) ಬುಧವಾರ ವಿಧಿವಶರಾಗಿದ್ದಾರೆ. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅಯ್ಯರ್ ಅವರು ನಿನ್ನೆ ದಿನ ಸಂಜೆ ಎಂದಿನಂತೆ ವಾಕಿಂಗ್ ಮುಗಿಸಿ ಮನೆಗೆ ಬಂದಿದ್ದರು, ನಂತರ ಏಕಾಏಕಿ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕೋಲ್ಕತ್ತಾದ ಲೊರೆಟೊ ಕಾಲೇಜಿನಿಂದ ಪದವಿ ಪಡೆದ ಅಯ್ಯರ್ 1971 ರಲ್ಲಿ ದೂರದರ್ಶನದಲ್ಲಿ ವೃತ್ತಿ ಜೀವನ ಆರಂಭಿಸಿದರು. ಅವರ ನಿರೂಪಣೆಗೆ ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ಪಡೆದಿದ್ದರು. ತಮ್ಮ ಅತ್ಯುತ್ತಮ ಕೆಲಸ, ಸಾಧನೆ ಮತ್ತು ಕೊಡುಗೆಗಾಗಿ 1989 ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಸುದ್ದಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದರ ಜೊತೆಗೆ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಯಿಂದ ಡಿಪ್ಲೊಮಾ ಹೊಂದಿರುವ ಅಯ್ಯರ್ ಹಲವಾರು ಮುದ್ರಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಹೊಂದಿದ್ದರು. ಶ್ರೀಧರ್ ಕ್ಷೀರಸಾಗರ್ ಅವರ ಟಿವಿ ನಾಟಕ "ಖಂಡಾನ್" ನಲ್ಲೂ ನಟಿಸಿದ್ದರು. ಅಲ್ಲದೇ ವಿಶ್ವ ವನ್ಯಜೀವಿ ನಿಧಿ (WWF) ಯೊಂದಿಗೂ ಅಯ್ಯರ್ ಕೈ ಜೋಡಿಸಿದ್ದರು.
ಗೀತಾಂಜಲಿ ಅಯ್ಯರ್ ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ, "ಗೀತಾಂಜಲಿ ಅಯ್ಯರ್ ನಮ್ಮ ಟಿವಿ ಪರದೆಗಳನ್ನು ಅಲಂಕರಿಸಿದ ದಿನಗಳನ್ನು ನಾವು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ. ನಮ್ಮ ಸುದ್ದಿ-ವೀಕ್ಷಣೆ ಅನುಭವಗಳಲ್ಲಿ ಅವರದು ಅಳಿಸಲಾಗದ ಗುರುತು. ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ, ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಅಯ್ಯರ ಆತ್ಮ ಚಿರಶಾಂತಿ ಪಡೆಯಲಿ ಎಂದು ಟ್ವೀಟ್ ಮಾಡಿದ್ದಾರೆ.
"ಭಾರತದ ಅತ್ಯುತ್ತಮ ಟಿವಿ ನ್ಯೂಸ್ ರೀಡರ್‌ಗಳಲ್ಲಿ ಒಬ್ಬರಾದ ಗೀತಾಂಜಲಿ ಅಯ್ಯರ್, ಆತ್ಮೀಯ ಮತ್ತು ಸೊಗಸಾದ ವ್ಯಕ್ತಿ ನಿಧನರಾಗಿದ್ದಾರೆ. ಅಯ್ಯರ್ ಪುತ್ರ ಮತ್ತು ಪುತ್ರಿ ಪಲ್ಲವಿ ಅಯ್ಯರ್ ಅವರನ್ನು ಅಗಲಿದ್ದು, ಅವರ ಕುಟುಂಬಕ್ಕೆ ನನ್ನ ಸಂತಾಪ" ಎಂದು ಪತ್ರಕರ್ತೆ ಶೀಲಾ ಭಟ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್, 'ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದಲ್ಲಿ ಮೊದಲ ಮತ್ತು ಅತ್ಯುತ್ತಮ ಇಂಗ್ಲಿಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾದ ಗೀತಾಂಜಲಿ ಅಯ್ಯರ್ ಅವರ ನಿಧನದ ವಿಷಯ ತಿಳಿದು ತೀವ್ರ ದುಃಖವಾಗಿದೆ. ಅಂಜಲಿ ಅವರು ಪತ್ರಿಕೋದ್ಯಮ ಮತ್ತು ಪ್ರಸಾರ ಉದ್ಯಮಗಳಲ್ಲಿ ಅಚ್ಚಳಿಯದ ಗುರುತು ಬಿಟ್ಟು ಹೋಗಿದ್ದಾರೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಓಂ ಶಾಂತಿ ಎಂದು ತಮ್ಮ ಅಧಿಕೃತ ಟ್ವಿಟರ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಸರ್ಕಾರದ ಮಧ್ಯಪ್ರವೇಶದಿಂದ ವಿಮಾನದರ ಶೇ 61ರಷ್ಟು ಇಳಿಕೆ: ಸಚಿವ ಸಿಂದಿಯಾ