ನವದೆಹಲಿ:ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗುತ್ತಿವೆ.
ಈ ಕುರಿತು ಕಾಂಗ್ರೆಸ್ ಮತ್ತು ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದು, ಅರುಣ್ ಜೇಟ್ಲಿ ಕ್ರೀಡಾಂಗಣ ಮತ್ತು ಪ್ರಧಾನಿ ಮೋದಿ ಕ್ರೀಡಾಂಗಣದ ಹೆಸರುಗಳನ್ನೂ ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ಫೆಬ್ರವರಿ 2020ರಲ್ಲಿ, ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಮೋದಿ ಕ್ರೀಡಾಂಗಣವೆಂದು ಮರುನಾಮಕರಣ ಮಾಡಲಾಯಿತು. ಮೋದಿಯವರು ಈ ಮೊದಲು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿದ್ದರು.
ಸೆಪ್ಟೆಂಬರ್ 2019ರಲ್ಲಿ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣವನ್ನು ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿತ್ತು. ಈ ಎರಡು ಕ್ರೀಡಾಂಗಣಗಳ ಹೆಸರುಗಳನ್ನು ಬದಲಾಯಿಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.
ಈ ಕುರಿತು ಕಾಂಗ್ರೆಸ್‌ನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಸರ್ಕಾರವು ಕ್ರೀಡಾಂಗಣಗಳಿಗೆ ಮರುನಾಮಕರಣ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ನರೇಂದ್ರ ಮೋದಿ ಮತ್ತು ಅರುಣ್ ಜೇಟ್ಲಿ ಕ್ರೀಡಾಂಗಣಗಳ ಮರುನಾಮಕರಣ ಈ ಪ್ರಕ್ರಿಯೆಗಳನ್ನು ಮುಂದುವರೆಸೋಣ ಎಂದಿದ್ದಾರೆ.
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರಸಿಂಗ್ ವಘೇಲಾ ಟ್ವೀಟ್ ಮಾಡಿದ್ದು, ನರೇಂದ್ರ ಮೋದಿ ಸರ್ಕಾರವು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದಂತೆ, ನರೇಂದ್ರ ಮೋದಿ ಕ್ರೀಡಾಂಗಣವನ್ನು ಮತ್ತೊಮ್ಮೆ ಸರ್ದಾರ್ ಪಟೇಲ್ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಅಧಿವೇಶನದ ಹೆಸರಲ್ಲಿ ಹಣ ವ್ಯರ್ಥವಾಗಲು ಪ್ರತಿಪಕ್ಷಗಳೇ ಕಾರಣ: ಕೇಂದ್ರ ಸಚಿವ ನಖ್ವಿ