ಅಮೃತಸರ (ಪಂಜಾಬ್): ಪಂಜಾಬ್ನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗೋಲ್ಡನ್ ಟೆಂಪಲ್ ಖ್ಯಾತಿಯ ಹರ್ಮಂದಿರ್ ಸಾಹಿಬ್ ಒಳಗೆ ಹಾರ್ಮೋನಿಯಂ ಬಳಕೆಯನ್ನು ನಿಷೇಧಿಸಲಾಗಿದೆ. ಈ ಮೂಲಕ ನೂರಕ್ಕೂ ಹೆಚ್ಚು ವರ್ಷಗಳ ಬಳಿಕ ಹಾರ್ಮೋನಿಯಂ ಸದ್ದು ನಿಧಾನವಾಗಿ ನಿಲ್ಲಲಿದೆ.
ಗೋಲ್ಡನ್ ಟೆಂಪಲ್ನಲ್ಲಿ ಹಾರ್ಮೋನಿಯಂ ಬಳಕೆ ನಿಲ್ಲಿಸುವಂತೆ ಅಕಾಲ್ ತಖ್ತ್ನ ಮುಖ್ಯಸ್ಥ ಹರ್‌ಪ್ರೀತ್ ಸಿಂಗ್ ಆದೇಶಿಸಿದ್ದಾರೆ. ಈ ಆದೇಶವನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು ಜಾರಿಗೊಳಿಸಲು ನಿರ್ಧರಿಸಿದೆ. ಹಾರ್ಮೋನಿಯಂ ಗುರು ಸಾಹಿಬ್‌ಗಳು ಬಳಸುವ ವಾದ್ಯವಲ್ಲ. ಆದರೆ, ಇದು ಭಾರತೀಯರಿಗೆ ಬ್ರಿಟಿಷರು ಒದಗಿಸಿದ ವಾದ್ಯವಾಗಿದೆ. ಇದನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಭಾರತಕ್ಕೆ ತರಲಾಯಿತು ಎಂದು ಹರ್‌ಪ್ರೀತ್ ಸಿಂಗ್ ಆದೇಶದಲ್ಲಿ ತಿಳಿಸಿದ್ದಾರೆ.
ಏಕಾಏಕಿ ನಿಲ್ಲಿಸುವುದಿಲ್ಲ: ಗೋಲ್ಡನ್ ಟೆಂಪಲ್ನಲ್ಲಿ ಹಾರ್ಮೋನಿಯಂ ಬಳಕೆಯನ್ನು ಏಕಾಏಕಿ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಕ್ರಮೇಣವಾಗಿ ಅವರ ಬಳಕೆ ನಿಲ್ಲಿಸಲಾಗುತ್ತದೆ. ಇದರಿಂದ ಗೋಲ್ಡನ್ ಟೆಂಪಲ್ಗೆ ಬರುವ ಭಕ್ತರಿಗೂ ಪರಿಪಾಠವಾಗಲಿದೆ. ಇನ್ಮುಂದೆ ಹೆಚ್ಚಾಗಿ ಕೀರ್ತನಾ ಸಮಯದಲ್ಲಿ ಹಾರ್ಮೋನಿಯಂ ಸ್ಥಾನದಲ್ಲಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸಲಾಗುವುದು ಎಂದು ತಿಳಿಸಲಾಗಿದೆ.