ನವದೆಹಲಿ:ನಟಿ ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕೇಂದ್ರದ ಐಟಿ ಸಚಿವಾಲಯ ಇಂಥ ವಿಡಿಯೋಗಳ ವಿಷಯದಲ್ಲಿ ಮಂಗಳವಾರ ಸಾಮಾಜಿಕ ಮಾಧ್ಯಮಗಳಿಗೆ ಮಾರ್ಗಸೂಚಿಗಳನ್ನು ಹೊಡಿಸಿದೆ. ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷ್ಟಿಸಲಾದ ನಕಲಿ ಕಂಟೆಂಟ್ಗಳನ್ನು 24 ಗಂಟೆಗಳಲ್ಲಿ ತೆಗೆದು ಹಾಕುವಂತೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಗೆ ಸಚಿವಾಲಯ ಮಾರ್ಗಸೂಚಿಗಳನ್ನು ಕಳುಹಿಸಿದೆ.
ಮೂಲಗಳ ಪ್ರಕಾರ, ಆನ್ಲೈನ್ ಮಧ್ಯವರ್ತಿಗಳಾಗಿ ಪ್ಲಾಟ್ಫಾರ್ಮ್ಗಳು ಅನುಸರಿಸಬೇಕಾದ ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳನ್ನು ಪುನರುಚ್ಚರಿಸಿದೆ. ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿಗತವಾಗಿ ಮೋಸ ಮಾಡಿದರೆ ಶಿಕ್ಷೆ, 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳವರೆಗೆ ದಂಡ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅಡಿ ಅಸ್ತಿತ್ವದಲ್ಲಿರುವ ನಿಯಮಗಳನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
"ಐಟಿ ಮಧ್ಯವರ್ತಿ ನಿಯಮಗಳು:ನಿಯಮ 3 (1) (ಬಿ) (vii): ಸಾಮಾಜಿಕ ಮಾಧ್ಯಮ ಮಧ್ಯವರ್ತಿ ನಿಯಮಗಳು ಮತ್ತು ನಿಬಂಧನೆಗಳು, ಗೌಪ್ಯತೆ ನೀತಿ ಅಥವಾ ಮಧ್ಯವರ್ತಿಯ ಬಳಕೆದಾರ ಒಪ್ಪಂದವನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನೊಬ್ಬ ವ್ಯಕ್ತಿಯಂತೆ ಕಾಣಿಸುವ ಯಾವುದೇ ವಿಷಯವನ್ನು ಪ್ರದರ್ಶನ ಮಾಡದಂತೆ ಬಳಕೆದಾರರಿಗೆ ತಿಳಿಸಬೇಕು" ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.