ಲಖನೌ:ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳನ್ನು ರಾಜಕೀಯದಿಂದ ಹೊರಹಾಕಲು ಮತ್ತು ಕ್ರಿಮಿನಲ್ಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಮಧ್ಯದ ಅಪವಿತ್ರ ಸಂಬಂಧವನ್ನು ಕೊನೆಗಾಣಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಸಂಸತ್ತು ಹಾಗೂ ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠ ಸೂಚನೆ ನೀಡಿದೆ.
ಬಿಎಸ್ಪಿ ಸಂಸದ ಅತುಲ್ ಕುಮಾರ್ ಸಿಂಗ್ ಉರ್ಫ್ ಅತುಲ್ ರಾಯ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಕುಮಾರ್ ಅವರ ಪೀಠ ಈ ಮಹತ್ವದ ಸೂಚನೆ ನೀಡಿದೆ. ಪ್ರಜಾಪ್ರಭುತ್ವ ಉಳಿಸಲು ಮತ್ತು ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಅಡಿ ಆಡಳಿತ ನಡೆಯಲು ಹಾಗೂ ನೆಲದ ಕಾನೂನಿನ ಪ್ರಕಾರ ದೇಶ ಮುನ್ನಡೆಯುವಂತಾಗಲು ಕ್ರಿಮಿನಲ್ ವ್ಯಕ್ತಿತ್ವದವರು ರಾಜಕೀಯಕ್ಕೆ ಅಥವಾ ಶಾಸಕಾಂಗಕ್ಕೆ ಪ್ರವೇಶಿಸದಂತೆ ತಡೆಯುವುದು ಸಂಸತ್ತಿನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ರಾಯ್ ವಿರುದ್ಧ 23 ಕೇಸುಗಳ ವಿಚಾರಣೆ ಬಾಕಿ ಇರುವುದು, ಆತನ ಸಂಪತ್ತಿನ ಬಲ ಮತ್ತು ಆತ್ಮ ಸಾಕ್ಷಿಗಳನ್ನು ಹಾಳು ಮಾಡುವ ಸಾಧ್ಯತೆಗಳನ್ನು ಪರಿಗಣಿಸಿದ ನ್ಯಾಯಪೀಠ, ಯಾವುದೇ ಕಾರಣದಿಂದಲೂ ಈತನಿಗೆ ಜಾಮೀನು ನೀಡಲಾಗಲ್ಲ ಎಂದಿತು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಎದುರು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದು, ಹಾಗೂ ಈ ಘಟನೆಯ ಸಾಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ ಆರೋಪಗಳಡಿ ರಾಯ್ ವಿರುದ್ಧ ಲಖನೌದ ಹಜರತ್ಗಂಜ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.