ನವದೆಹಲಿ: ಕೋವಿಡ್ ರೋಗ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂಬುದನ್ನು ದೃಢಪಡಿಸಲು ಯಾವುದೇ ಪುರಾವೆಗಳಿಲ್ಲದ ಕಾರಣ ಕೋವಿಡ್ ಚಿಕಿತ್ಸೆಯಿಂದ ರೆಮ್ಡಿಸಿವಿರ್ ಔಷಧಿಯನ್ನು ಕೈಬಿಡಲಾಗುವುದು ಎಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಅಧೀಕ್ಷಕ ಡಾ.ಡಿ.ಎಸ್ ರಾಣಾ ತಿಳಿಸಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಿರ್ದೇಶನದ ಪ್ರಕಾರ, ಕೋವಿಡ್ ಚಿಕಿತ್ಸಾ ಪ್ರೋಟೋಕಾಲ್ ಪಟ್ಟಿಯಿಂದ ರೆಮ್ಡಿಸಿವಿರ್ ನಿಲ್ಲಿಸುವ ಚಿಂತನೆ ಇದೆ. ಈಗಾಗಲೇ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲಾಗಿದೆ ಎಂದು ಅವರು ಹೇಳಿದರು.
ಪ್ಲಾಸ್ಮಾ ಥೆರಪಿಯಲ್ಲಿ ಸೋಂಕಿಗೆ ಒಳಗಾದ ವ್ಯಕ್ತಿಗೆ ನಾವು ಪ್ರಿ ಫಾರ್ವರ್ಡ್ ಆ್ಯಂಟಿ ಬಾಡಿ ನೀಡುತ್ತೇವೆ. ಇದರಿಂದಾಗಿ ಈ ಆ್ಯಂಟಿ ಬಾಡಿ ವೈರಸ್‌ನೊಂದಿಗೆ ಹೋರಾಡುತ್ತದೆ. ಕೊರೊನಾ ವೈರಸ್ ದಾಳಿ ಮಾಡಿದಾಗ ಸಾಮಾನ್ಯವಾಗಿ ಆ್ಯಂಟಿ ಬಾಡಿ ರೂಪುಗೊಳ್ಳುತ್ತವೆ. ಕಳೆದ ಒಂದು ವರ್ಷ ಪ್ಲಾಸ್ಮಾ ಚಿಕಿತ್ಸೆ ನೀಡುತ್ತಿದ್ದರೂ, ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಪ್ಲಾಸ್ಮಾ ಚಿಕಿತ್ಸೆಯನ್ನು ವೈಜ್ಞಾನಿಕ ಆಧಾರದ ಮೇಲೆ ಪ್ರಾರಂಭಿಸಲಾಯಿತು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನಿಲ್ಲಿಸಲಾಗಿದೆ ಎಂದು ರಾಣಾ ಹೇಳುತ್ತಾರೆ.
ಇದನ್ನೂಓದಿ: ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯಗೆ ಕೋವಿಡ್ ದೃಢ
ಕೋವಿಡ್ ಔಷಧಿಗಳ ಬಗ್ಗೆ ಹೇಳುವುದಾದರೆ, ರೆಮ್ಡಿಸಿವಿರ್ ಸೋಂಕು ನಿಯಂತ್ರಿಸುತ್ತದೆ ಎನ್ನುವುದಕ್ಕೆ ಯಾವುದೇ ಬಲವಾದ ಪುರಾವೆಗಳಿಲ್ಲ. ಹಾಗಾಗಿ, ಅದನ್ನು ಬಳಸದಿರಲು ನಿರ್ಧರಿಸಿದ್ದೇವೆ ಎಂದು ಡಾ.ರಾಣಾ ಮಾಹಿತಿ ನೀಡಿದ್ದಾರೆ.