ಕರ್ನಾಟಕ

karnataka

ETV Bharat / bharat

ಸನಾತನ ಧರ್ಮ ಕುರಿತ ವಿಚಾರ: ಉದಯನಿಧಿ ಸ್ಟಾಲಿನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ - ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ನಿರಾಕರಣೆ

ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಜಿಲ್ಲಾ ಕೋರ್ಟ್​ ಅಥವಾ ಹೈಕೋರ್ಟ್ ನಲ್ಲಿ ನಡೆಸುವಂತೆ ಸುಪ್ರೀಂಕೋರ್ಟ್​ ಸೂಚಿಸಿದೆ.

ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್

By ETV Bharat Karnataka Team

Published : Nov 29, 2023, 10:31 PM IST

ನವದೆಹಲಿ: ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.

ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಿದರೆ, ದೇಶದಾದ್ಯಂತ ಇಂತಹ ಸಾಕಷ್ಟು ಪ್ರಕರಣಗಳು ಬರುತ್ತವೆ. ಆದ್ದರಿಂದ ನಮ್ಮಲ್ಲಿ ಈ ಪ್ರಕರಣಗಳ ವಿಚಾರಣೆಗಾಗಿ ಜಿಲ್ಲಾ ಕೋರ್ಟ್​, ಹೈಕೋರ್ಟ್​ಗಳಿವೆ. ಅಲ್ಲಿ ಹೋಗಿ ಇತ್ಯರ್ಥ ಮಾಡಿಕೊಳ್ಳಿ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠ ಹೇಳಿದೆ. ಉದಯನಿಧಿ ಸ್ಟಾಲಿನ್ ವಿರುದ್ಧ ವಕೀಲ ವಿಷ್ಣು ಶಂಕರ್ ಜೈನ್ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇಲ್ಲಿ ವಿಚಾರಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಹೈಕೋರ್ಟ್‌ಗೆ ಹೋಗಿ ಎಂದು ನ್ಯಾಯಮೂರ್ತಿ ಖನ್ನಾ ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ :ಕಳೆದ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರ ವೇದಿಕೆ ಆಯೋಜಿಸಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿ, ಇದು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ವ್ಯಾಪಕ ಪರ ವಿರೋಧದ ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ನಾಯಕರು ಇದನ್ನು ಹಿಂದೂಗಳ 'ನರಮೇಧ'ದ ಕರೆ ಎಂದು ವ್ಯಾಖ್ಯಾನಿಸಿದ್ದರು.

ನನ್ನ ಹೇಳಿಕೆಗೆ ನಾನು ಬದ್ಧ.. ಉದಯ್​ನಿಧಿ ಸ್ಟಾಲಿನ್​ :ಸನಾತನ ಧರ್ಮ ಕೊರೊನಾ ವೈರಸ್, ಮಲೇರಿಯಾ ಮತ್ತು ಡೆಂಘೀ ವೈರಸ್ ಮತ್ತು ಸೊಳ್ಳೆಗಳಿಂದ ಉಂಟಾಗುವ ಜ್ವರವಿದ್ದಂತೆ. ಇಂಥದ್ದನ್ನು ಬೇರು ಸಮೇತ ಕಿತ್ತು ಹಾಕಬೇಕು. ಸನಾತನ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತದೆ. ಇದರ ನಿರ್ಮೂಲನೆ ಮಾಡುವುದರ ಮೂಲಕ ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿಕೆ ನೀಡಿದ್ದೆ. ಸನಾತನಿ ಜನರ ಮಾರಣಹೋಮಕ್ಕೆ ಕರೆ ನೀಡಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದ ಉದಯ್​ನಿಧಿ ಸ್ಟಾಲಿನ್​, ತನ್ನ ಹೇಳಿಕೆಗೆ ಈಗಲೂ ಬದ್ಧ ಎಂದು ಸ್ಪಷ್ಟಪಡಿಸಿದ್ದರು.

ಸನಾತನ ಧರ್ಮದ ಬಗ್ಗೆ ನಾನು ಹೇಳಿದ ಪ್ರತಿಯೊಂದು ಮಾತಿಗೂ ಬದ್ಧವಾಗಿದ್ದೇನೆ. ಆ ಧರ್ಮದಿಂದ ತುಳಿತಕ್ಕೊಳಗಾದವರ ಪರವಾಗಿ ಮಾತನಾಡಿದ್ದೇನೆ. ಅದರಿಂದ ಸಮಾಜದ ಮೇಲಾದ ದುಷ್ಪರಿಣಾಮಗಳ ಬಗ್ಗೆ ಹೋರಾಟ ನಡೆಸಿದ ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ಬರಹಗಳನ್ನು ಯಾವುದೇ ವೇದಿಕೆಯಲ್ಲಿ ಪ್ರಸ್ತುತಪಡಿಸಲು ನಾನು ಸಿದ್ಧನಿದ್ದೇನೆ. ಸನಾತನ ಧರ್ಮವು ಅನೇಕ ಸಾಮಾಜಿಕ ಅನಿಷ್ಟಗಳಿಗೆ ಕಾರಣವಾಗಿದೆ ಎಂಬುದು ನನ್ನ ಅಭಿಮತ. ಹೇಳಿಕೆಗೆ ಬದ್ಧವಾಗಿದ್ದು, ಯಾವುದೇ ಸವಾಲುಗಳಿಗೂ ನಾನು ಸಿದ್ಧನಿದ್ದೇನೆ ಎಂದಿದ್ದರು.

ಇದನ್ನೂ ಓದಿ :ಸನಾತನ ಧರ್ಮದ ಕುರಿತ ವಿವಾದದ ಹಿಂದೆ ಬಿಜೆಪಿ ಕೈವಾಡವಿದೆ : ಹೈಕೋರ್ಟ್​ಗೆ ಉದಯನಿಧಿ ಸ್ಟಾಲಿನ್​ ಹೇಳಿಕೆ

ABOUT THE AUTHOR

...view details