ಕೋಲ್ಕತ್ತಾ(ಪ.ಬಂಗಾಳ):ದೇಶ ಮತ್ತು ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಕಾಳಿಘಾಟ್ ದೇವಾಲಯದೊಂದಿಗೆ ಇದೀಗ ಸಂಬಂಧ ಹೊಂದಲಿದೆ. ಈ ಕಾರ್ಪೊರೇಟ್ ಸಂಸ್ಥೆ ಕಾಳಿಘಾಟ್ ದೇವಾಲಯದ ಜೀರ್ಣೋದ್ಧಾರದಿಂದ ಪ್ರಾರಂಭವಾಗಿ ಅದರ ಸೌಂದರ್ಯೀಕರಣದ ಜವಾಬ್ದಾರಿ ಕೈಗೊಳ್ಳಲು ಸಜ್ಜಾಗಿದೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಪ್ರಕಾರ ಕಾಳಿಘಾಟ್ ದೇವಾಲಯದ ಪುನಶ್ಚೇತನ ಕಾರ್ಯ ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್, ರಿಲಯನ್ಸ್ ಗ್ರೂಪ್ ಪ್ರತಿನಿಧಿಗಳು ಹಾಗೂ ದೇವಾಲಯದ ಸಮಿತಿ ಸದಸ್ಯರು ಭಾಗವಹಿಸಿದ್ದರು. ಈ ವೇಳೆ, ಸುಧಾರಣೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಮೂಲಗಳ ಪ್ರಕಾರ "ದೇವಾಲಯದ ಗರ್ಭಾ ಗೃಹ, ಕುಂದಾ ಕೊಳ, ಭೋಗ್ ಘರ್, ನಾಟ್ ಮಂದಿರ, ಒಳಗಿನ ಚಾಟಲ್ ಮತ್ತು ಹೊರಗಿನ ಗೋಡೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ" ಎಂದು ವರದಿಯಾಗಿದೆ.
ಗರ್ಭಾ ಗೃಹ, ನಾಟ್ ಮಂದಿರ ಮತ್ತು ಭೋಗ್ ಘರ್ ಪಾರಂಪರಿಕ ಕಟ್ಟಡಗಳ 'ಎ ಗ್ರೇಟ್' ಪಟ್ಟಿಯಲ್ಲಿರುವುದರಿಂದ, ಪಾರಂಪರಿಕ ಅಂಶವನ್ನು ಗಮನದಲ್ಲಿಟ್ಟುಕೊಂಡು ಪುನಶ್ಚೇತನ ಕಾರ್ಯ ಮಾಡಲಾಗುವುದು. ಕೆಎಂಸಿಯ ಹೆರಿಟೇಜ್ ಶಾಖೆಯ ಅನುಮೋದನೆಯೊಂದಿಗೆ ಟೈಲ್ಸ್ ಅಳವಡಿಸಲಾಗುವುದು. ಪ್ರವೇಶ ದ್ವಾರದಿಂದ ಆದಿಗಂಗೆಯವರೆಗಿನ ರಸ್ತೆಯನ್ನು ಸುಂದರಗೊಳಿಸುವ ಯೋಜನೆಯೂ ಇದೆ.
ಪುರಸಭೆಯಲ್ಲಿ ನಡೆದ ಸಭೆಯ ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ದೇವಸ್ಥಾನ ಸಮಿತಿ ಸದಸ್ಯ ಬಬ್ಲು ಹಲ್ದರ್ ಮಾತನಾಡಿ "ಕೆಲವು ದಿನಗಳ ಹಿಂದೆ ಪ್ರಾಥಮಿಕ ಚರ್ಚೆ ನಡೆದಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ. ಸ್ಕೈ ವಾಕ್ ನಂತೆ ದೇವಸ್ಥಾನದ ಜೀರ್ಣೋದ್ಧಾರ, ಅಲಂಕಾರ ಕಾರ್ಯವೂ ನಡೆಯಲಿದೆ. ಈ ವರ್ಷ ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲಾಗುತ್ತದೆ" ಎಂದು ತಿಳಿಸಿದರು.