ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ (Bengal Global Business Summit - BGBS) ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಯಕತ್ವ ಶ್ಲಾಘಿಸಿದ್ದಾರೆ. ಅಲ್ಲದೇ, ಪಶ್ಚಿಮ ಬಂಗಾಳದಲ್ಲಿ 20 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಹೂಡಿಕೆಯನ್ನೂ ಘೋಷಿಸಿದ್ದಾರೆ.
ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ಅಂಬಾನಿ, ಸಿಎಂ ಮಮತಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಬಂಗಾಳವು ಆದರ್ಶ ಹೂಡಿಕೆ ವಾತಾವರಣವನ್ನು ಸೃಷ್ಟಿಸಿದೆ. ರಾಜ್ಯವು ಈಗ ಹೂಡಿಕೆಯ ತಾಣವಾಗಿ ಮಾರ್ಪಟ್ಟಿದೆ. ನಮಗೆ ಬಂಗಾಳವು ಮತ್ತೊಂದು ಪ್ರಮುಖ ಹೂಡಿಕೆಯ ತಾಣವಾಗಿದೆ ಎಂದರು.
ಅಲ್ಲದೇ, ಮಮತಾ ನಾಯಕತ್ವದ ಬಗ್ಗೆ ಮಾತನಾಡಿದ ಅಂಬಾನಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಮ್ಮನ್ನು 'ಅಗ್ನಿಕನ್ಯಾ' (ಫೈರ್‌ಬ್ರಾಂಡ್) ಎಂದು ಸರಿಯಾಗಿ ಉಲ್ಲೇಖಿಸಿದ್ದರು ಎಂದು ನೆನಪಿಸಿದರು. ಇದೇ ವೇಳೆ, ಮುಂದಿನ ಮೂರು ವರ್ಷಗಳಲ್ಲಿ ಬಂಗಾಳದಲ್ಲಿ 20 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆಯ ಯೋಜನೆಗಳನ್ನು ಅವರು ಘೋಷಣೆ ಮಾಡಿದರು.
ರಾಜ್ಯದಲ್ಲಿ ರಿಲಯನ್ಸ್‌ನಿಂದ ಅಸ್ತಿತ್ವದಲ್ಲಿರುವ 45,000 ಕೋಟಿ ರೂ. ಹೊಸ ಹೂಡಿಕೆಗಳು ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳನ್ನು ಡಿಜಿಟಲೀಕರಣಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಈ ಪ್ರದೇಶದಲ್ಲಿ ಜಿಯೋ ದೂರಸಂಪರ್ಕ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಬಂಗಾಳದಲ್ಲಿ ಜೈವಿಕ ಇಂಧನ ಉತ್ಪಾದನೆಯಲ್ಲಿ ರಿಲಯನ್ಸ್‌ನ ಪಾತ್ರವನ್ನು ಹೆಚ್ಚಿಸಲು ಒತ್ತು ನೀಡುವುದಾಗಿ ಅಂಬಾನಿ ಹೇಳಿದರು.
ಇದರ ಹೊರತಾಗಿ ಅವರು ಇನ್ನೂ ಮೂರು ಹೊಸ ಉಪಕ್ರಮಗಳನ್ನು ಪ್ರಕಟಿಸಿದರು. ಮೊದಲನೆಯದಾಗಿ, ಕಾಳಿಘಾಟ್ ದೇವಾಲಯದ ಜೀರ್ಣೋದ್ಧಾರದಲ್ಲಿ ರಿಲಯನ್ಸ್ ಸಂಸ್ಥೆ ಸಾಥ್ ನೀಡುತ್ತದೆ. ಎರಡನೆಯದಾಗಿ, ರಿಲಯನ್ಸ್ ಮಾರ್ಟ್ ಬಂಗಾಳದ ಕರಕುಶಲ ವಸ್ತುಗಳನ್ನು ಉತ್ತೇಜಿಸುತ್ತದೆ. ಮೂರನೆಯದಾಗಿ, ಕೈಮಗ್ಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ನಾರಾಯಣ ಗ್ರೂಪ್‌ನ ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ಇತರ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವ ಬಗ್ಗೆ ಘೋಷಿಸಿದರು. ಮುಂದಿನ ಎರಡು ವರ್ಷಗಳಲ್ಲಿ ಕೋಲ್ಕತ್ತಾದಲ್ಲಿ ಆಧುನಿಕ ಆಸ್ಪತ್ರೆ ನಿರ್ಮಿಸುವುದಾಗಿ ದೇವಿ ಪ್ರಸಾದ್ ಶೆಟ್ಟಿ ಹೇಳಿದರು. ಜೇಕ್ ಗ್ರೂಪ್‌ನ ಹರ್ಷ್ ನಿಯೋಟಿಯಾ, ಡೈರಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು. ಇದರಿಂದ ಸುಮಾರು 2,000 ಜನರಿಗೆ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ ಎಂದರು. ವಿಪ್ರೊದ ರಿಷಾದ್ ಪ್ರೇಮ್‌ಜಿ ಅವರು, ಉದ್ಯಮದ ಪ್ರಮುಖರಾದ ಸಂಜೀವ್ ಗೋಯೆಂಕಾ, ಐಟಿಸಿ ಅಧ್ಯಕ್ಷ ಸಂಜೀವ್ ಪುರಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಸೋಲಾರ್ ಫಲಕಗಳ ಬೆಲೆ ಇಳಿಕೆ ಹೊಸ ಯೋಜನೆಗಳಿಗೆ ಲಾಭಕರ: ಕ್ರಿಸಿಲ್ ವರದಿ