ನವದೆಹಲಿ:ಕೋವಿಡ್ ವೈರಸ್ ರೂಪಾಂತರಿ ಒಮಿಕ್ರಾನ್ ಸೋಂಕಿನ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತವು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆಯನ್ನು 2022ರ ಜನವರಿ 31ರವರೆಗೆ ರದ್ದುಗೊಳಿಸಿದೆ. ಗುರುವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ಡಿಸೆಂಬರ್ 15ರಿಂದ ಯಾವುದೇ ರೀತಿಯ ಮಾರ್ಗಸೂಚಿ ಇಲ್ಲದೇ, 14 ದೇಶಗಳ ಮೇಲಿನ ನಿರ್ಬಂಧ ಮುಂದುವರೆಸಿ ವಿಮಾನ ಸೇವೆ ಆರಂಭಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಬಳಿಕ ಡಿ. 1ರಂದು ಈ ಮರುಚಾಲನೆ ನಿರ್ಧಾರವನ್ನೂ ಕೂಡ ಡಿಜಿಸಿಎ ಮುಂದೂಡಿತ್ತು.
ಈಗ ಮತ್ತೆ ಪ್ರಕಟಣೆ ಹೊರಡಿಸಿರುವ ಡಿಜಿಸಿಎ, ಭಾರತಕ್ಕೆ ಬರುವ ಮತ್ತು ಇಲ್ಲಿಂದ ಹೊರಡುವ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರ ಸೇವೆಯನ್ನು 2022ರ ಜನವರಿ 31ರವರೆಗೆ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.