ಜಮ್ಮು ಮತ್ತು ಕಾಶ್ಮೀರ:ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಗಾಗಿ ಇಂದಿನಿಂದ ನೋಂದಣಿ ಪ್ರಕ್ರಿಯೆ ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ ಆರಂಭವಾಗಿದೆ. ಜುಲೈ 1ರಂದು ಯಾತ್ರೆ ಪ್ರಾರಂಭವಾಗಲಿದೆ. ಜೂನ್ 30ರಂದು ಜಮ್ಮುವಿನಿಂದ ಯಾತ್ರೆಗೆ ಚಾಲನೆ ದೊರೆಯಲಿದೆ. ಆಗಸ್ಟ್ 31ರವರೆಗೆ ಯಾತ್ರೆ ಮುಂದುವರಿಯಲಿದೆ. ಸರ್ಕಾರವು 62 ದಿನಗಳ ಯಾತ್ರೆಗೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುತ್ತಿದೆ.
ಆಫ್‌ಲೈನ್ ನೋಂದಣಿ:ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿ, ಯಾತ್ರಿಕರಿಗೆ ಸುಗಮ ಪ್ರಯಾಣ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಟೆಲಿಕಾಂ ಸೇವೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಚಿಕಿತ್ಸೆಗಾಗಿ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಜುಲೈ 1ರಿಂದ ಜಮ್ಮು ಮತ್ತು ಕಾಶ್ಮೀರದ 20 ಬ್ಯಾಂಕ್ ಶಾಖೆಗಳಲ್ಲಿ ಆಫ್ಲೈನ್ನಲ್ಲಿ ಪ್ರಯಾಣಿಕರಿಗೆ ಮುಂಗಡ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದೇಶಾದ್ಯಂತ 542 ಬ್ಯಾಂಕ್ ಶಾಖೆಗಳಲ್ಲಿ ಆಫ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಆರತಿಯ ನೇರ ಪ್ರಸಾರ: ಇದೇ ಮೊದಲ ಬಾರಿಗೆ ಪವಿತ್ರ ಗುಹೆಯಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಆರತಿಯ ನೇರ ಪ್ರಸಾರವಾಗಲಿದೆ. ಪ್ರಯಾಣಿಕರ ನೋಂದಣಿಗಾಗಿ ಕಡ್ಡಾಯ ಆರೋಗ್ಯ ಪ್ರಮಾಣಪತ್ರ ತಯಾರಿಸಲು ಜಮ್ಮು ಮತ್ತು ಕಾಶ್ಮೀರದ ವಿವಿಧ ಆಸ್ಪತ್ರೆಗಳಲ್ಲಿ 164ಕ್ಕೂ ಹೆಚ್ಚು ವೈದ್ಯರನ್ನು ನಿಯೋಜಿಸಲಾಗಿದೆ.