ಕರ್ನಾಟಕ

karnataka

By

Published : Feb 19, 2023, 2:26 PM IST

ETV Bharat / bharat

ರಾಜ್ಯಗಳಿಗೆ ವಿಶೇಷ ನೆರವು ನೀಡದಿದ್ದರೆ ಪ್ರಾದೇಶಿಕ ಅಸಮಾನತೆ ಹೆಚ್ಚಳ: ಬಿಹಾರ ಸಚಿವ

ದೇಶದಲ್ಲಿ ಅತಿ ಹಿಂದುಳಿದ ರಾಜ್ಯವಾದ ಬಿಹಾರಕ್ಕೆ ಕೇಂದ್ರ ಸರ್ಕಾರದ ವಿಶೇಷ ನೆರವಿನ ಅಗತ್ಯವಿದೆ ಎಂದು ಬಿಹಾರದ ಹಣಕಾಸು ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ.

No special assistance to poor states
No special assistance to poor states

ಪಾಟ್ನಾ: ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಕೇಂದ್ರ ಸರ್ಕಾರ ವಿಶೇಷ ನೆರವು ನೀಡದಿದ್ದರೆ ದೇಶದಲ್ಲಿ ಪ್ರಾದೇಶಿಕ ಅಸಮಾನತೆಗಳು ಹೆಚ್ಚಾಗುವುದು ನಿಶ್ಚಿತ ಎಂದು ಬಿಹಾರದ ಹಣಕಾಸು ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ. ಯಾವುದೇ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡದಂತೆ ಹಣಕಾಸು ಆಯೋಗವು ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅವರು ಶನಿವಾರ ಈ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಹಣಕಾಸು ಸಚಿವರು ಇಂತಹ ಹೇಳಿಕೆಯನ್ನು ಹೇಗೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ. ನೀತಿ ಆಯೋಗವು ಬಡ ರಾಜ್ಯಗಳಿಗೆ ವಿಶೇಷ ನೆರವು ನೀಡಬೇಕೆಂದು ಹೇಳುತ್ತದೆ. ಹೀಗಿರುವಾಗ ಕೇಂದ್ರ ಹಣಕಾಸು ಸಚಿವರ ಹೇಳಿಕೆಯು ಖಂಡಿತವಾಗಿಯೂ ಪ್ರಾದೇಶಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂದು ಚೌಧರಿ ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರದಿಂದ ಅತಿ ಹೆಚ್ಚು ವಿಶೇಷ ಆರ್ಥಿಕ ನೆರವು ಅಗತ್ಯವಿರುವ ರಾಜ್ಯ ಬಿಹಾರವಾಗಿದೆ. ಬಿಹಾರದ ಅಭಿವೃದ್ಧಿಯು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಆದಾಗ್ಯೂ ಇದು ದೇಶದ ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಕಳೆದ ದಶಕದಲ್ಲಿ ಬಿಹಾರವು ಅನೇಕ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿಯನ್ನು ಸಾಧಿಸಿದೆ ಎಂದು ನೀತಿ ಆಯೋಗ್ ಒಪ್ಪಿಕೊಂಡಿದೆ. ಆದರೆ ಅದರ ದುರ್ಬಲ ತಳಹದಿಯ ಕಾರಣದಿಂದಾಗಿ, ಇತರ ರಾಜ್ಯಗಳೊಂದಿಗೆ ಮುನ್ನಡೆಯಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದೇ ಕಾರಣಕ್ಕಾಗಿ ನಾವು ಕೇಂದ್ರದಿಂದ ವಿಶೇಷ ಸಹಾಯ ಕೋರುತ್ತಿದ್ದೇವೆ ಎಂದು ಚೌಧರಿ ಹೇಳಿದರು. ಗುಡ್ಡಗಾಡು ಪ್ರದೇಶಗಳು, ಆಯಕಟ್ಟಿನ ಅಂತಾರಾಷ್ಟ್ರೀಯ ಗಡಿಗಳು ಮತ್ತು ಆರ್ಥಿಕ ಮತ್ತು ಮೂಲಸೌಕರ್ಯಗಳಲ್ಲಿ ಹಿಂದುಳಿದಿರುವಂಥ ಕೆಲ ಹಿಂದುಳಿದ ರಾಜ್ಯಗಳಿಗೆ ಅನುಕೂಲವಾಗುವಂತೆ ವಿಶೇಷ ವರ್ಗದ ಸ್ಥಾನಮಾನವನ್ನು 1969 ರಲ್ಲಿ ಪರಿಚಯಿಸಲಾಯಿತು.

ಅಸ್ಸಾಂ, ನಾಗಾಲ್ಯಾಂಡ್, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಸಿಕ್ಕಿಂ, ತ್ರಿಪುರಾ, ಅರುಣಾಚಲ ಪ್ರದೇಶ, ಮಿಜೋರಾಂ, ಉತ್ತರಾಖಂಡ ಮತ್ತು ತೆಲಂಗಾಣ ಹೀಗೆ ಹನ್ನೊಂದು ರಾಜ್ಯಗಳಿಗೆ ವಿಶೇಷ ವರ್ಗದ ರಾಜ್ಯದ ಸ್ಥಾನಮಾನವನ್ನು ನೀಡಲಾಗಿದೆ.

ಕರಾವಳಿ ರಾಜ್ಯವಾದ ಒಡಿಶಾ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಯಾವುದೇ ಯೋಜನೆ ಕೇಂದ್ರದ ಮುಂದೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲ್ ಸೀತಾರಾಮನ್ ಸ್ಪಷ್ಟಪಡಿಸಿದ ನಂತರ, ಒಡಿಶಾದ ಜನರಿಗೆ ಬಿಜೆಪಿ ದ್ರೋಹ ಮಾಡಿದೆ ಎಂದು ಆಡಳಿತಾರೂಢ ಬಿಜೆಡಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ಆರೋಪಿಸಿವೆ. ಕೇಂದ್ರ ಹಣಕಾಸು ಸಚಿವರು ದುರದೃಷ್ಟವಶಾತ್ ಬಿಜೆಪಿಯ ನಿಜಬಣ್ಣವನ್ನು ಬಯಲು ಮಾಡಿದ್ದಾರೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಡಿಶಾಗೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಭರವಸೆ ನೀಡಿದ್ದರೂ, ಅದರ ನಾಯಕರು ಆ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಇದು ಒಡಿಶಾದ ಜನತೆಗೆ ದ್ರೋಹ ಬಗೆದಂತೆ ಎಂದು ಬಿಜೆಡಿ ಉಪಾಧ್ಯಕ್ಷ ಮತ್ತು ಶಾಸಕ ದೇಬಿ ಪ್ರಸಾದ್ ಮಿಶ್ರಾ ಹೇಳಿದ್ದಾರೆ.

ಬಿಜೆಪಿ ಒಂದು ಪಕ್ಷವಾಗಿ ಸುಳ್ಳುಗಾರರ ಪಕ್ಷ ಎಂದು ಸಾಬೀತಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಅದು ಸಂಪೂರ್ಣವಾಗಿ ಮರೆತಿದೆ. ಒಡಿಶಾದ ಜನರು ಸುಳ್ಳು ಮತ್ತು ದ್ರೋಹದಲ್ಲಿ ತೊಡಗುವ ಪಕ್ಷವನ್ನು ಸಹಿಸುವುದಿಲ್ಲ ಎಂದು ಮಿಶ್ರಾ ಹೇಳಿದರು.

ಇದನ್ನೂ ಓದಿ:

ABOUT THE AUTHOR

...view details