ಬೆಂಗಳೂರು: ಪ್ರಪಂಚದಲ್ಲಿ ದೊಡ್ಡ ಆರ್ಥಿಕತೆ ಹೊಂದಿರುವ ಜಿ20 ರಾಷ್ಟ್ರಗಳು ಸುಸ್ಥಿರ, ಸೆಕ್ಯುರ್ ಮತ್ತು ಕ್ಲೀನ್ ಎನರ್ಜಿಯತ್ತ ಸಾಗಬೇಕಿದೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಜಿ20 ರಾಷ್ಟ್ರಗಳ ಪ್ರಥಮ ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಮಾತನಾಡಿದ ಅವರು, ಜಿ 20 ರಾಷ್ಟ್ರಗಳ ಪ್ರತಿನಿಧಿಯವರನ್ನು ಭಾರತದ ಪರವಾಗಿ ಸ್ವಾಗತಿಸಿದರು. ಎನರ್ಜಿ ಟ್ರಾನ್ಸಿಶನ್ ನಲ್ಲಿ ಹೊಸ ತಂತ್ರಜ್ಞಾನಗಳೊಂದಿಗೆ ರಾಷ್ಟ್ರಗಳು ಪರಸ್ಪರ ಸಹಕರಿಸಬೇಕು ಎಂದು ತಿಳಿಸಿದರು.
ಇಂಧನ ಶಕ್ತಿಯ ಪರಿವರ್ತನೆಗೆ ಎಲ್ಲಾ ಪಾಲುದಾರರಿಂದ ಸಾಮೂಹಿಕ ಪ್ರಯತ್ನದ ಕಾರ್ಯಶೀಲತೆ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಅಗತ್ಯಗಳನ್ನು ಬೆಂಬಲಿಸಿದಾಗ ಮಾತ್ರ ಶುದ್ಧ ಇಂಧನ ಸಾರ್ವತ್ರಿಕವಾಗಿ ಪ್ರವೇಶ ಸಾಧ್ಯವಿದೆ ಎಂದು ಅಭಿಮತ ವ್ಯಕ್ತಪಡಿಸಿದರು. ಜಿ-20 ಸಭೆ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಲಿದೆ. ವಿವಿಧ ದೇಶಗಳ ಆರ್ಥಿಕ ಸಮಸ್ಯೆಗಳ ಬಗ್ಗೆ ಈ ಶೃಂಗಸಭೆಯು ಬೆಳಕು ಚೆಲ್ಲುತ್ತದೆ. ಇಂಧನ ಉತ್ಪಾದನೆಯ ಜೊತೆಗೆ ಬಳಕೆಯ ವಿಚಾರದಲ್ಲಿಯೂ ದೇಶಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಶುದ್ಧ ಇಂಧನಕ್ಕಾಗಿ ಸಾರ್ವತ್ರಿಕ ಪ್ರವೇಶ ಮತ್ತು ಕೈಗೆಟುಕುವ, ಅಂತರ್ಗತ ಇಂಧನ ಪರಿವರ್ತನೆ ಮಾರ್ಗಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ರೆಡ್ಯೂಸ್ ರಿಯೂಸ್ ರಿಸೈಕಲ್ ಎನರ್ಜಿ ನೀತಿ: ಭಾರತೀಯರು ರಿಡ್ಯೂಸ್ ರಿಯೂಸ್ ರೀಸೈಕಲ್ ಎನರ್ಜಿ ನೀತಿಯನ್ನು ಅನುಸರಿಸುತ್ತಿದೆ. ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಎಲ್ಲವನ್ನು ಒದಗಿಸುತ್ತದೆ. ಆದರೆ ಇದು ಮನುಷ್ಯನ ದುರಾಸೆಯಾಗಬಾರದು. ಇಂಧನ ಸಂರಕ್ಷಣೆ ಮತ್ತು ಸುಸ್ಥಿರತೆಯ ಮಹತ್ವವನ್ನು ಅರಿತು ಜಿ 20 ರಾಷ್ಟ್ರಗಳು ಮುನ್ನಡೆಯಬೇಕಿದೆ ಎಂದರು.