ನವದೆಹಲಿ:ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರಿಗೆ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ಕರುಣಿಸಿದೆ.
ಕಳೆದ ವಿಚಾರಣೆಯ ವೇಳೆ, ಜನವರಿ 26ರಂದು ಕೆಂಪು ಕೋಟೆಗೆ ಹೋಗುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ನಾನು ಯಾವುದೇ ಕರೆ ನೀಡಿಲ್ಲ ಎಂದು ದೀಪ್ ಸಿಧು ನ್ಯಾಯಾಲಯಕ್ಕೆ ತಿಳಿಸಿದ್ದರು.
ಅಲ್ಲದೇ ಸಿಧು ಪರ ವಕೀಲರು, ಸಿಧು ಪ್ರತಿಭಟನೆಗಾಗಿ ಕರೆ ನೀಡಿದ್ದಕ್ಕೆ, ಜನಸಮೂಹವನ್ನು ಪ್ರತಿಭಟನೆಯಲ್ಲಿ ತೊಡಗುವಂತೆ ಪ್ರಚೋದಿಸಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೆ ಸಿಧು ಯಾವ ರೈತ ಮುಖಂಡ, ರೈತ ಸಂಘದ ಸದಸ್ಯರಲ್ಲ ಎಂದು ತಿಳಿಸಿದ್ದರು.
ಗಣರಾಜ್ಯೋತ್ಸವದಂದು ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಕೆಂಪು ಕೋಟೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 9 ರಂದು ಸಿಧುವನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿತ್ತು.
ಇದನ್ನೂ ಓದಿ:ದೆಹಲಿ ಹಿಂಸಾಚಾರ: ಎಫ್‌ಐಆರ್‌ನಲ್ಲಿ ಪಂಜಾಬಿ ನಟ ದೀಪ್ ಸಿಧು ಹೆಸರು ಸೇರ್ಪಡೆ
ಪ್ರತಿಭಟನಾ ನಿರತ ರೈತರು ಜನವರಿ 26 ರಂದು ಟ್ರಾಕ್ಟರ್ ಮೆರವಣಿಗೆ ನಡೆಸಲು ಕರೆ ನೀಡಿದ್ದರು. ಗಾಜಿಪುರ ಗಡಿಯಿಂದ ಐಟಿಒ ತಲುಪಿದ ಸಾವಿರಾರು ಪ್ರತಿಭಟನಾಕಾರ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಅವರಿಗೆ ದೆಹಲಿ ಪೊಲೀಸರು ಅನುಮತಿಸಿದ ಮಾರ್ಗವನ್ನು ನೀಡಿದ್ದರು ಆದರೆ ಒಂದು ಬಣವು ಆ ಅನುಮತಿಸಿದ ಮಾರ್ಗಕ್ಕೆ ಬದಲು ಮೂಲ ಕಾರ್ಯಕ್ರಮದ ಭಾಗವಾಗಿರದ ಕೆಂಪು ಕೋಟೆಗೆ ನುಗ್ಗಿತ್ತು. ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಸಹ ಹಾರಿಸಲಾಗಿತ್ತು.