ನವದೆಹಲಿ: ದೆಹಲಿಯ ಕೆಂಪು ಕೋಟೆಯನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಜುಲೈ 21 ರಿಂದ ಆಗಸ್ಟ್ 15 ರವರೆಗೆ ಯಾವುದೇ ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಕೆಂಪು ಕೋಟೆಯ ಮೇಲ್ವಿಚಾರಣೆ ಹೊತ್ತಿರುವ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಈ ನಿರ್ದೇಶನ ನೀಡಿದೆ.
ಕಳೆದ ನವೆಂಬರ್ 26ರ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ತೀವ್ರ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕೆಂಪು ಕೋಟೆಯ ಬಳಿ ರೈತರ ಧ್ವಜ ಹಾರಿಸಲಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಸ್ವಲ್ಪ ಸಮಯದವರೆಗೆ ಅವಕಾಶ ನೀಡದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೋವಿಡ್ 2ನೇ ಅಲೆಯ ಆರ್ಭಟ ಹಿನ್ನೆಲೆಯಲ್ಲಿ ಕೆಂಪು ಕೋಟೆಗೆ ನಿರ್ಬಂಧ ಹೇರಲಾಗಿತ್ತು. ಜೂನ್ 16 ರಿಂದ ಪ್ರವಾಸಿಗರು ವೀಕ್ಷಣೆಗೆ ಅನುಮತಿ ನೀಡಲಾಗಿತ್ತು.
ಜುಲೈ 21 ರಿಂದ ಆಗಸ್ಟ್ 15ರ ವರೆಗೆ ಕೆಂಪು ಕೋಟೆಗೆ ಇಲ್ಲ ಪ್ರವೇಶ ಡ್ರೋಣ್ ದಾಳಿಯ ಬೆದರಿಕೆ!
ಮತ್ತೊಂದೆಡೆ, ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದೆಹಲಿಯಲ್ಲಿ ಭಯೋತ್ಪಾದಕ ದಾಳಿಯ ಅಪಾಯವಿದೆ ಎಂದು ಭದ್ರತಾ ಪಡೆಗಳಿಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಜಮ್ಮು ಮತ್ತು ಕಾಶ್ಮೀರದ ಭಾರತೀಯ ವಾಯುಪಡೆಯ ಏರ್‌ಬೇಸ್ ಮೇಲೆ ಇತ್ತೀಚೆಗೆ ಡ್ರೋಣ್ ದಾಳಿ ನಡೆದಿತ್ತು. ಗುಪ್ತಚರ ಮೂಲಗಳ ಪ್ರಕಾರ, ಪಾಕಿಸ್ತಾನ ಪ್ರೇರಿತ ಉಗ್ರರು ಈ ಬಾರಿ ದೆಹಲಿಯನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ ; ನಾಳೆ ದೆಹಲಿಯ ಜಂತರ್‌ಮಂತರ್‌ನಲ್ಲಿ ರೈತರ ಪ್ರತಿಭಟನೆ
ಈ ನಿಟ್ಟಿನಲ್ಲಿ ಭದ್ರತಾ ಸಂಸ್ಥೆಗಳು ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಿವೆ. ಗುಪ್ತಚರ ಅಧಿಕಾರಿಗಳ ಮಾಹಿತಿ ಆಧರಿಸಿ ದೆಹಲಿ ಪೊಲೀಸ್ ಆಯುಕ್ತ ಬಾಲಾಜಿ ಶ್ರೀವಾಸ್ತವ, ನಗರದ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಡ್ರೋಣ್ ದಾಳಿಗೆ ಗುರಿಯಾಗುವ ಪ್ರದೇಶಗಳಲ್ಲಿ ವಿಶೇಷ ಕಣ್ಗಾವಲಿಗೆ ಆದೇಶಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಪೊಲೀಸರು ವಿಶೇಷ ನಿಯಂತ್ರಣ ಕೊಠಡಿ ಸ್ಥಾಪಿಸಿದ್ದಾರೆ. ಐತಿಹಾಸಿಕ ಕೆಂಪು ಕೋಟೆಯಲ್ಲಿ ನಾಲ್ಕು ಡ್ರೋಣ್ ವಿರೋಧಿ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು. ದಾಳಿಕೋರರ ಡ್ರೋಣ್ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲು ಪೊಲೀಸ್ ಮತ್ತು ಭದ್ರತಾ ಪಡೆಗಳಿಗೆ ಮೊದಲ ಬಾರಿಗೆ ತರಬೇತಿ ನೀಡಲಾಗುತ್ತಿದೆ.