ಚೆನ್ನೈ: ಭಾರತೀಯ ಹವಾಮಾನ ಇಲಾಖೆಯು ನವೆಂಬರ್ 11 ರವರೆಗೆ ಅಂದರೆ ಮುಂದಿನ ಮೂರು ದಿನಗಳವರೆಗೆ ತಮಿಳುನಾಡಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ತೀವ್ರ ಮಳೆಯಾಗುತ್ತಿದೆ. ಪರಿಣಾಮ ರಾಜಧಾನಿ ಚೆನ್ನೈ ಹೆಚ್ಚು ಹಾನಿಗೊಳಗಾಗಿದೆ. ಇದೆಲ್ಲದರ ಪರಿಣಾಮ ಇಂದು ಜಲಾವೃತ ಪರಿಸ್ಥಿತಿಯ ಬಗ್ಗೆ ಮದ್ರಾಸ್ ಹೈಕೋರ್ಟ್ ಚೆನ್ನೈ ಕಾರ್ಪೊರೇಷನ್ ಅನ್ನು ತರಾಟೆಗೆ ತೆಗೆದುಕೊಂಡಿತ್ತು. ಹಾಗೆ ಪರಿಸ್ಥಿತಿಯನ್ನು ಹತೋಟಿಗೆ ತರದಿದ್ದರೆ ಸ್ವಯಂಪ್ರೇರಿತ ದೂರು ಪ್ರಕ್ರಿಯೆಗಳನ್ನು ಪ್ರಾರಂಭಿಸುವುದಾಗಿ ಎಚ್ಚರಿಸಿತ್ತು.
ನವೆಂಬರ್ 11 ರವರೆಗೆ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ ಮತ್ತು ಆಳ ಸಮುದ್ರದಲ್ಲಿರುವವರು ತಕ್ಷಣ ಕರಾವಳಿಗೆ ಮರಳಲು ಸೂಚಿಸಲಾಗಿದೆ.
ಮಳೆ ಸಂಬಂಧಿತ ಘಟನೆಯಲ್ಲಿ ಈವರೆಗೆ ಐವರು ಸಾವಿಗೀಡಾಗಿದ್ದಾರೆ. ಚೆನ್ನೈ, ಕಾಂಚೀಪುರಂ, ಚೆಂಗಲ್‌ಪಟ್ಟು, ತಿರುವಳ್ಳೂರು, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಮೈಲಾಡುತುರೈ, ಕಡಲೂರು ಒಂಬತ್ತು ಜಿಲ್ಲೆಗಳಿಗೆ ಮುಂದಿನ ಎರಡು ದಿನಗಳ ಕಾಲ (ನವೆಂಬರ್ 10,11) ರಜೆ ಘೋಷಣೆ ಮಾಡಲಾಗಿದೆ ಹಾಗೆ ಪುದುಕೊಟ್ಟೈ, ಶಿವಗಂಗೈ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರೆ, ತಿರುಚ್ಚಿ ಜಿಲ್ಲಾಡಳಿತ ಬುಧವಾರ ಶಾಲೆಗೆ ಮಾತ್ರ ರಜೆ ಘೋಷಿಸಿದೆ.