ನವದೆಹಲಿ:ಅಗ್ನಿಪಥ್ ಯೋಜನೆಯಿಂದ ಸೇನಾ ನೇಮಕಾತಿ ಮತ್ತು ರೆಜಿಮೆಂಟ್ ವ್ಯವಸ್ಥೆ ಬದಲಾಗುತ್ತದೆ ಎಂಬ ಶಂಕೆಗೆ ಸಶಸ್ತ್ರ ಪಡೆಗಳ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಈ ಹಿಂದಿನಂತೆಯೇ ಸೇನಾ ನೇಮಕಾತಿ ನಡೆಯಲಿದೆ. ದೇಶವನ್ನು ಕಾಯುವ ರೆಜಿಮೆಂಟ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯ ಬಗೆಗಿನ ಅನುಮಾನಗಳ ಬಗ್ಗೆ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಸ್ಪಷ್ಟನೆ ನೀಡಿದ್ದು, ನೇಮಕಾತಿ ಪ್ರಕ್ರಿಯೆಯು ಬದಲಾಗುವುದಿಲ್ಲ. ಮಿಲಿಟರಿಯಲ್ಲಿನ ಸಾಂಪ್ರದಾಯಿಕ ರೆಜಿಮೆಂಟೇಶನ್ ವ್ಯವಸ್ಥೆಯು ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದರು.
ಅಗ್ನಿಪಥ್ ಯೋಜನೆಯು ಸಶಸ್ತ್ರಪಡೆಗಳು ಮತ್ತು ರಕ್ಷಣಾ ಸಚಿವಾಲಯದ ದೀರ್ಘಾವಧಿಯ ಸಮಾಲೋಚನೆಯ ಫಲಿತಾಂಶವಾಗಿದೆ. ಅಗ್ನಿವೀರರಿಗೆ 4 ವರ್ಷಗಳ ಅವಧಿಯನ್ನು ಕಲ್ಪಿಸುವ ಈ ಯೋಜನೆಯು ಸೇನೆಯಲ್ಲಿ ಅತ್ಯಂತ ಸುಧಾರಣಾ ಕ್ರಮವಾಗಿದೆ ಎಂದು ಅವರು ತಿಳಿಸಿದರು.
1989 ರಿಂದ ವಿವಿಧ ಸಮಿತಿಗಳು ಈ ಕುರಿತು ಶಿಫಾರಸ್ಸುಗಳನ್ನು ಮಾಡಿದ್ದು, ಅಗ್ನಿಪಥ್ ಯೋಜನೆಯನ್ನು ಅಂತಿಮಗೊಳಿಸುವಲ್ಲಿ ಸಮಿತಿಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದರು.