ಹೈದರಾಬಾದ್:ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನವು ಸಂಸದರ ಅಮಾನತಿನಲ್ಲಿ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 78 ಸಂಸದರನ್ನು ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ. ಈ ಹಿಂದೆ ಅಂದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಾಲದಲ್ಲಿ 1989 ರಲ್ಲಿ ಏಕಕಾಲಕ್ಕೆ 63 ಸಂಸದರನ್ನು ಅಮಾನತು ಮಾಡಿದ ದಾಖಲೆಯನ್ನು ಮೀರಿಸಿತು.
ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರಿ ಗದ್ದಲ ಎಬ್ಬಿಸುತ್ತಿದ್ದಾರೆ. ಸ್ಪೀಕರ್ ಮತ್ತು ಸಭಾಪತಿಗಳು ಎಷ್ಟೇ ತಿಳಿ ಹೇಳಿದರೂ ವಿಪಕ್ಷಗಳು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಫಲಕಗಳನ್ನು ಸದನದೊಳಗೆ ತರಕೂಡದು ಎಂಬ ನಿಯಮವಿದ್ದರೂ, ಉಲ್ಲಂಘಿಸಿ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಲಾಗುತ್ತಿದೆ.
ಸ್ಪೀಕರ್ ಪೀಠದ ವೇದಿಕೆಗೂ ಕೆಲ ಸಂಸದರು ನುಗ್ಗಿ ಅವಮಾನ, ದುರ್ನಡತೆ, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಡಿಸೆಂಬರ್ 18 ರಂದು ಲೋಕಸಭೆಯಲ್ಲಿ 33 ಸಂಸದರು ಮತ್ತು ರಾಜ್ಯಸಭೆಯಲ್ಲಿ 45 ಜನರನ್ನು ಏಕಕಾಲಕ್ಕೆ ಅಮಾನತು ಮಾಡಿ ಆದೇಶಿಸಲಾಗಿದೆ. ಒಟ್ಟಾರೆ 92 ಸಂಸದರನ್ನು ಈವರೆಗೂ ಶಿಕ್ಷೆಗೆ ಗುರಿಪಡಿಸಿ, ಅಧಿವೇಶನ ಮುಗಿಯುವವರೆಗೂ ಸದನಕ್ಕೆ ಬರಕೂಡದು ಎಂದು ಸೂಚಿಸಲಾಗಿದೆ. ಇದು ಸಂಸತ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದೆ.
ಈ ಹಿಂದೆ ಅಮಾನತು ಎಷ್ಟಾಗಿತ್ತು?:ಈ ಹಿಂದೆ 1989 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕಾಲದಲ್ಲಿ ಸತತ ಮೂರು ದಿನಗಳ ಕಾಲ ಲೋಕಸಭೆಯಿಂದ 63 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಇದು ಈವರೆಗಿನ ಅತಿ ಹೆಚ್ಚು ಸಂಸದರ ಅಮಾನತು ಮಾಡಿದ ಶಿಕ್ಷೆಯಾಗಿತ್ತು. ಬಳಿಕ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 25 ಕಾಂಗ್ರೆಸ್ ಸಂಸದರನ್ನು ಸದನಕ್ಕೆ ಅಡ್ಡಿಪಡಿಸಿದ ಕಾರಣ ಐದು ದಿನಗಳ ಕಾಲ ಅಮಾನತುಗೊಳಿಸಿದ್ದರು.