ನವದೆಹಲಿ:ಉತ್ತರಾಖಂಡದಲ್ಲಿ ಮಳೆಯಾರ್ಭಟ ಮುಂದುವರಿದಿದೆ. ಈವರೆಗೆ 45 ಮಂದಿ ಸಾವನ್ನಪ್ಪಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಧಾರಾಕಾರ ಮಳೆ ಅಬ್ಬರಿಸಿದೆ. ಇಲ್ಲಿನ ಕುಮಾನ್ ಪ್ರದೇಶದಲ್ಲಿ ಪ್ರವಾಹ, ಭೂಕುಸಿತ ಉಂಟಾಗಿದೆ. ಕುಮಾನ್ ಹಾಗೂ ಮುಕ್ತೇಶ್ವರ್ ಪ್ರದೇಶ ಸೇರಿ ಹಲವು ನಗರಗಳು ಹಾನಿಗೊಳಗಾಗಿವೆ.
ಇಂದು ಸಹ ರಾಜ್ಯದ 8 ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಪಾವತ್, ನೈನಿತಾಲ್, ಉಧಾಮ್ ಸಿಂಗ್ ನಗರ್, ಭಾಗೇಶ್ವರ್, ಅಲ್ಮೋರ ಮತ್ತು ಚಮೋಲಿ ಪ್ರದೇಶದಲ್ಲಿ ಭಾರಿ ಹೆಚ್ಚು ಮಳೆಯಾಗಲಿದೆ ಎಂದಿದೆ.
ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ:
ಮಳೆಯಿಂದ ವಿಪರೀತ ಹಾನಿಗೊಳಗಾದ ಪ್ರದೇಶದಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ವೈಮಾನಿಕ ಸಮೀಕ್ಷೆ ನಡೆಸಿ, ಪರಿಶೀಲನೆ ನಡೆಸಿದರು.
ಕಳೆದೊಂದು ವಾರದಿಂದ ಕುಮಾನ್ ಹಾಗೂ ಮುಕ್ತೇಶ್ವರ್ ಪ್ರದೇಶದಲ್ಲಿ ಹಿಂದೆಂದೂ ಕಂಡರಿಯದ ಮಳೆಯಾಗಿದೆ. ಸುಮಾರು 107 ವರ್ಷದ ಬಳಿಕ ಈ ಭಾಗದಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ.
ಅಲ್ಲದೇ, ರಾಜ್ಯದ ಕೆಲವು ಭಾಗಗಳಲ್ಲಿ 200 ಮಿ.ಮೀ, 400 ಮಿ.ಮೀ ಹಾಗೂ 500 ಮೀ.ಮೀ ವರೆಗೂ ಮಳೆ ಸುರಿದಿದೆ. ಜುಲೈ 10, 1990ರಲ್ಲಿ ಪಂತ್ ನಗರ 228 ಮಿ.ಮೀ ಮಳೆಗೆ ಸಾಕ್ಷಿಯಾಗಿತ್ತು. ಆದರೆ ನಿನ್ನೆ ಒಂದೇ ದಿನ ಬರೋಬ್ಬರಿ 403.2 ಮಿ.ಮೀ ಮಳೆಯಾಗಿದೆ.
ಮುಕ್ತೇಶ್ವರ್ ಪ್ರದೇಶದಲ್ಲಿ ಮೇ 1, 1897ರಲ್ಲಿ 254.5 ಮಿ.ಮೀಟರ್ ಮಳೆಯಾಗಿತ್ತು. ಇದೀಗ 340.8 ಮಿ.ಮೀಟರ್ ಮಳೆಯಾಗಿದ್ದು, ಇಡೀ ಪ್ರದೇಶ ಪ್ರವಾಹದಿಂದಾಗಿ ನಲುಗಿದೆ. ಚಂಪಾವತ್ ಜಿಲ್ಲೆಯೂ 579 ಮಿ.ಮೀಟರ್ ಮಳೆಯಿಂದಾಗಿ ಸಂಪೂರ್ಣ ಪ್ರವಾಹಕ್ಕೆ ತುತ್ತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೈನಿತಾಲ್ 535 ಮಿ.ಮೀ, ಬಿಮ್ತಾಲ್ 402 ಮಿ.ಮೀ, ಹಲ್ದ್ವಾನಿ 325.4, ರಾಮ್ನಗರ್ 227 ಮಿ.ಮೀಟರ್ ಹಾಗೂ ರುದ್ರಪುರ್ನಲ್ಲಿ 484 ಮಿ.ಮೀಟರ್ ಮಳೆಯಾಗಿದೆ.
ಎನ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆ:
ಮಳೆ ನೀರಿನಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಅಕ್ಟೋಬರ್ 21, 22, 23ರಂದು ಉತ್ತರಾಖಂಡದಲ್ಲಿ ಒಣಹವೆ ಮುಂದಿವರಿಯಲಿದ್ದು, ಅಲ್ಲಿಯವರೆಗೂ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ:ಉತ್ತರಾಖಂಡ ಭೀಕರ ಪ್ರವಾಹಕ್ಕೆ 45 ಸಾವು: ಮನೆ ಕಳೆದುಕೊಂಡವರಿಗೆ 1 ಲಕ್ಷ, ಮೃತರಿಗೆ 4 ಲಕ್ಷ ರೂ.ಪರಿಹಾರ