ಹೈದರಾಬಾದ್, ತೆಲಂಗಾಣ:ಹೈದರಾಬಾದ್ನಲ್ಲಿ ಗಣೇಶ ಉತ್ಸವ ಎಷ್ಟು ಜೋರಾಗಿ ನಡೆಯುತ್ತದೋ, ಅಷ್ಟೇ ಪ್ರಾಮುಖ್ಯತೆ ಗಣೇಶನಿಗಾಗಿ ತಯಾರಿಸುವ ಲಡ್ಡಿಗೂ ಇದೆ. ಇಲ್ಲಿನ ಬಾಳಾಪುರ ಲಡ್ಡು ಪ್ರತಿವರ್ಷವೂ ಅತಿಹೆಚ್ಚು ಬೆಲೆಗೆ ಮಾರಾಟವಾಗಿ ದಾಖಲೆ ಸೃಷ್ಟಿಸುತ್ತದೆ. ಆದರೆ, ಈ ಬಾರಿ ಬಾಳಾಪುರ ಲಡ್ಡನ್ನೇ ಮೀರಿಸಿ ಮತ್ತೊಂದು ಕಡೆ ತಯಾರಾದ ಲಡ್ಡು ಕ್ರಯವಾಗುವ ಮೂಲಕ ದಾಖಲೆ ಬರೆದಿದೆ.
ಹೌದು, ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರದ ಬಂಡ್ಲಗುಡ ವ್ಯಾಪ್ತಿಯ ರಿಚ್‌ಮಂಡ್ ವಿಲ್ಲಾ ಕಾಲೋನಿ ಲಡ್ಡು ಹರಾಜಾದ ದರ ತೆಲಂಗಾಣ ರಾಜ್ಯದಲ್ಲಿ ಹೊಸ ದಾಖಲೆ ಬರೆದಿದೆ. ಭಾನುವಾರ ನಡೆದ ಲಡ್ಡು ಹರಾಜಿನಲ್ಲಿ ಈ ಲಡ್ಡು ಬರೋಬ್ಬರಿ 69.80 ಲಕ್ಷಕ್ಕೆ ಕ್ರಯವಾಗಿದೆ. ಡಾ.ಸಾಜಿ ಡಿಸೋಜಿ ಅವರ ತಂಡ ಈ ಲಡ್ಡನ್ನು ಇಷ್ಟು ದುಬಾರಿ ಮೊತ್ತಕ್ಕೆ ಖರೀದಿಸಿದೆ.