ಗುವಾಹಟಿ (ಅಸ್ಸೋಂ):ಮಹಾರಾಷ್ಟ್ರ ಮಹಾವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನೆಯ ಹಿರಿಯ ನಾಯಕ ಏಕನಾಥ ಶಿಂಧೆ ತಮ್ಮೊಂದಿಗೆ 40 ಶಾಸಕರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ತತ್ವಕ್ಕಾಗಿ ನಾವು ಬದ್ಧ ಎಂದು ಪುನರುಚ್ಛರಿಸಿದ್ದಾರೆ.
ಶಿವಸೇನೆಯ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿರುವ ಏಕನಾಥ ಏಕಾಏಕಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಸೋಮವಾರ ಸಂಜೆ ಶಾಸಕರನ್ನು ಕಟ್ಟಿಕೊಂಡು ಅವರು ಬಿಜೆಪಿ ಆಡಳಿತವಿರುವ ಗುಜರಾತ್ಗೆ ತೆರಳಿದ್ದರು. ಆದರೆ, ಬುಧವಾರ ಬೆಳಗ್ಗೆಯ ವೇಳೆಗೆ ತಮ್ಮ ಮೊಕ್ಕಾಂ ಬದಲಿಸಿ, ಅಸ್ಸೋಂನ ಗುವಾಹಟಿಗೆ ಬಂದಿದ್ಧಾರೆ.
ಗುವಾಹಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಂಧೆ, "ನನ್ನೊಂದಿಗೆ 39 ಶಾಸಕರಿದ್ದಾರೆ. ನಾವೆಲ್ಲರೂ ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವ ತತ್ವಕ್ಕೆ ಬದ್ಧ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ" ಎಂದು ಹೇಳಿದರು. ಆದರೆ, ತಮ್ಮ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಅಲ್ಲದೇ, ಬಿಜೆಪಿ ಆಡಳಿತವಿರುವ ಅಸ್ಸೋಂ ಯಾಕೆ ಬಂದಿದ್ದೀರಾ ಎಂಬ ಪ್ರಶ್ನೆಗೆ ಇದೊಂದು ಉತ್ತಮವಾದ ಸ್ಥಳ ಎಂದಷ್ಟೇ ಹೇಳಿ ಏಕನಾಥ್ ಜಾರಿಕೊಂಡರು.