ಹೈದರಾಬಾದ್:ಲಾಕ್ಡೌನ್ ನಮ್ಮೆಲ್ಲರ ಜೀವನದಲ್ಲಿ ಒಂದಿಲ್ಲೊಂದು ರೀತಿಯ ಪ್ರತಿಕೂಲ ಪರಿಣಾಮ ಬೀರಿದೆ. ಬಹುತೇಕರು ಲಾಕ್ಡೌನ್ ಕಾರಣದಿಂದ ಮಾನಸಿಕ ಒತ್ತಡ ಹಾಗೂ ಬೇಸರದಿಂದ ಬಳಲಿದ್ದಾರೆ. ಮಾನಸಿಕ ಸ್ಥಿತಿಯ ಏರುಪೇರಿನಿಂದ ಕೆಲವರು ಅತಿ ಆಹಾರ ಸೇವಿಸುತ್ತಿದ್ದಾರೆ. ಈ ಸಮಯದಲ್ಲಿ ಕೆಲವರಿಗೆ ತಿಳಿಯದಂತೆಯೇ ಅವರ ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾಗಿ ತೂಕ ವಿಪರೀತ ಹೆಚ್ಚುತ್ತಿದೆ. ಆದರೂ ಸಮತೋಲಿತ ಆಹಾರ ಸೇವಿಸುವ ಮೂಲಕ ಬೊಜ್ಜು ಬರದಂತೆ ತಡೆದು, ಆರೋಗ್ಯಕರವಾಗಿ ಬದುಕಬಹುದು. ಯಾವೆಲ್ಲ ಆಹಾರ ಪದಾರ್ಥಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ಇವೇ ನೋಡಿ ದೇಹ ತೂಕ ಹೆಚ್ಚಿಸುವ ಪ್ರಮುಖ ಆಹಾರ ಪದಾರ್ಥಗಳು
ಸಕ್ಕರೆ ಮಿಶ್ರಿತ ಸೋಡಾ :ಸಕ್ಕರೆ ಮಿಶ್ರಣದ ಸೋಡಾ ಪೇಯಗಳು ಕೇವಲ ಕ್ಯಾಲೋರಿ ಹೆಚ್ಚಿಸುವ ದ್ರಾವಣಗಳಾಗಿವೆ. ಇವುಗಳಿಂದ ದೇಹಕ್ಕೆ ಯಾವುದೇ ಪೌಷ್ಠಿಕಾಂಶ ಸಿಗದಿದ್ದರೂ ದಿನಗಳೆದಂತೆ ಇವುಗಳ ವ್ಯಸನ ಆರಂಭವಾಗುತ್ತದೆ. ಆಗಾಗ ಸಕ್ಕರೆ ಮಿಶ್ರಿತ ಸೋಡಾ ಪೇಯಗಳನ್ನು ಕುಡಿಯುವವರ ದೇಹತೂಕ ಜಾಸ್ತಿಯಾಗುವ ಸಾಧ್ಯತೆ ಹೆಚ್ಚು ಅಂತಿದೆ ಅಧ್ಯಯನ. ಅಲ್ಲದೆ ಬೊಜ್ಜು, ಟೈಪ್-2 ಮಧುಮೇಹ, ಹೃದಯ ಬೇನೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಈ ಪೇಯಗಳೇ ಕಾರಣವಾಗಬಲ್ಲವು.
ಪಿಜ್ಜಾ:ಖುಷಿಯಿಂದ ಬಾಯಿ ಚಪ್ಪರಿಸಿ ತಿನ್ನುವ ಪಿಜ್ಜಾಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ವಾಸ್ತವ. ಇವು ಬರೀ ಅನಾರೋಗ್ಯಕರ ಕ್ಯಾಲೋರಿಗಳಿಂದ ತುಂಬಿರುತ್ತವೆ. ಬಹುತೇಕ ಪಿಜ್ಜಾಗಳನ್ನು ಮೈದಾ ಹಿಟ್ಟು, ಚೀಸ್ ಹಾಗೂ ಮಾಂಸಗಳಿಂದ ತಯಾರಿಸಲಾಗಿರುತ್ತದೆ. ಹೆಚ್ಚು ಪ್ರಮಾಣದಲ್ಲಿ ಮಾಂಸ ಸೇವನೆಯಿಂದ ಬೊಜ್ಜು, ಹೃದಯ ಬೇನೆ ಸಮಸ್ಯೆಗಳು ಕಾಡಬಹುದು. ಕೆಲವೊಮ್ಮೆ ಕ್ಯಾನ್ಸರ್ಗೂ ಕಾರಣವಾಗಬಹುದು. ಪಿಜ್ಜಾ ತಿನ್ನಲೇಬೇಕಿದ್ದರೆ ಧಾನ್ಯಗಳ ಹಿಟ್ಟು, ತರಕಾರಿಗಳನ್ನು ಬಳಸಿ ತಯಾರಿಸಿದ ಪಿಜ್ಜಾಗಳನ್ನೇ ತಿನ್ನಿ. ಮನೆಯಲ್ಲೇ ಆರೋಗ್ಯಕರ ಪಿಜ್ಜಾ ತಯಾರಿಸಿ ಸೇವಿಸುವುದು ಇನ್ನೂ ಉತ್ತಮ.