ಜನವರಿ 10, 2024 ರಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಶಿಂಧೆ ಗುಂಪುಗಳು ತಮ್ಮನ್ನು ತೊರೆದ ಅಥವಾ ತಮ್ಮೊಂದಿಗೆ ಸೇರದ ವಿಧಾನಸಭೆ ಸದಸ್ಯರನ್ನು ಅನರ್ಹಗೊಳಿಸುವಂತೆ ಪರಸ್ಪರರ ವಿರುದ್ಧ ಸಲ್ಲಿಸಿದ ಅರ್ಜಿ ಮತ್ತು ಪ್ರತಿ ಅರ್ಜಿಗಳ ಬಗ್ಗೆ ತೀರ್ಪು ನೀಡಿದರು.
ಸ್ಪೀಕರ್ ಎರಡೂ ಗುಂಪುಗಳ ಯಾವುದೇ ಸದಸ್ಯರನ್ನು ಅನರ್ಹಗೊಳಿಸಲಿಲ್ಲ, ಬದಲಿಗೆ ನಿಜವಾದ ಶಿವಸೇನೆ ಯಾವುದು ಎಂದು ನಿರ್ಧರಿಸಲು ಮುಂದಾದರು. ತಾವು ಪ್ರಮುಖವಾಗಿ ಮೂರು ಅಂಶಗಳನ್ನು ಆಧರಿಸಿ ತೀರ್ಪು ನೀಡಿದ್ದಾಗಿ ನಾರ್ವೇಕರ್ ತಿಳಿಸಿದ್ದಾರೆ. ಆ ಅಂಶಗಳು ಯಾವುವೆಂದರೆ; ಶಿವಸೇನೆ ಪಕ್ಷದ ಸಂವಿಧಾನ, ನಾಯಕತ್ವದ ರಚನೆ ಮತ್ತು ಅದರ ಶಾಸಕಾಂಗ ಬಹುಮತ.
ಪಕ್ಷದೊಳಗಿನ ಭಿನ್ನಾಭಿಪ್ರಾಯ ಅಥವಾ ಅಶಿಸ್ತಿಗಾಗಿ ಯಾವುದೇ ಪಕ್ಷದ ನಾಯಕತ್ವವು ಭಾರತದ ಸಂವಿಧಾನದ ಹತ್ತನೇ ಅನುಸೂಚಿಯ (ಪಕ್ಷಾಂತರ ವಿರೋಧಿ ಕಾನೂನು ಎಂದೂ ಕರೆಯಲ್ಪಡುತ್ತದೆ) ನಿಬಂಧನೆಯನ್ನು ಬಳಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಂಪರ್ಕಕ್ಕೆ ಸಿಗದ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸಲು ಅವರಿಗೆ ಯಾವುದೇ ಸೂಕ್ತ ಆಧಾರ ಕಂಡುಬಂದಿಲ್ಲ.
ಠಾಕ್ರೆ ಗುಂಪಿನ 14 ಶಾಸಕರಿಗೆ ವೈಯಕ್ತಿಕವಾಗಿ ವಿಪ್ ಅನ್ನು ತಲುಪಿಸಲಾಗಿಲ್ಲದ ಕಾರಣದಿಂದ ಅವರನ್ನು ಅನರ್ಹಗೊಳಿಸುವ ಅರ್ಜಿಯನ್ನು ಕೂಡ ಅವರು ಈ ಸಂದರ್ಭದಲ್ಲಿ ತಿರಸ್ಕರಿಸಿದ್ದಾರೆ. ಈ ತೀರ್ಮಾನಕ್ಕೆ ಬರುವಾಗ, ಠಾಕ್ರೆ ಬಣಕ್ಕೆ ಸೇರಿದ ಸುನಿಲ್ ಪ್ರಭು ಅವರು 2022 ರ ಜೂನ್ 21 ರಿಂದ ವಿಪ್ ಹುದ್ದೆಯನ್ನು ತ್ಯಜಿಸಿದ್ದರು ಮತ್ತು ಅವರ ಸ್ಥಾನಕ್ಕೆ ಶಿಂಧೆ ಗುಂಪಿನ ಭರತ್ ಗೋಗವಾಲೆ ಅವರನ್ನು ನೇಮಿಸಲಾಗಿತ್ತು ಎಂಬ ಅಂಶವನ್ನು ಸ್ಪೀಕರ್ ಪರಿಗಣಿಸಿದ್ದಾರೆ.
ಮೇ 11, 2024 ರಂದು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ವಿಶ್ವಾಸಮತ ಯಾಚನೆ ಮಾಡುವಂತೆ ರಾಜ್ಯಪಾಲರು ಸೂಚಿಸಿದ್ದು ತಪ್ಪು ಮತ್ತು ಸ್ಪೀಕರ್ ಕೂಡ ಶಿಂಧೆ ಬಣವನ್ನು ಪಕ್ಷದ ವಿಪ್ ಆಗಿ ಗುರುತಿಸುವಲ್ಲಿ ತಪ್ಪು ಮಾಡಿದ್ದಾರೆ ಎಂದು ತೀರ್ಪು ನೀಡಿತ್ತು. ಅನರ್ಹತೆಯ ಅರ್ಜಿಗಳ ಬಗ್ಗೆ ನಿರ್ಧರಿಸುವಂತೆ ಮತ್ತು ಇತರ ವಿಷಯಗಳ ಜೊತೆಗೆ, ಎರಡು ಬಣಗಳಲ್ಲಿ ಯಾವುದು ಪಕ್ಷದ ನಿಜವಾದ ರಾಜಕೀಯ ವಿಭಾಗ ಎಂದು ಮೇಲ್ನೋಟಕ್ಕೆ ನಿರ್ಧರಿಸುವಂತೆ ನ್ಯಾಯಾಲಯವು ಸ್ಪೀಕರ್ಗೆ ಸೂಚಿಸಿತ್ತು.
ಸ್ಪೀಕರ್ ಅವರ ತೀರ್ಪು ಸುಪ್ರೀಂ ಕೋರ್ಟ್ ಆದೇಶದ ಕೆಲ ಅಂಶಗಳನ್ನು ಆಧರಿಸಿದೆ ಮತ್ತು ಶಿವಸೇನೆಯ ಸಂವಿಧಾನದ ವಿವರಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ 1999 ರ ದಾಖಲೆಯು ಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು. 2013 ಮತ್ತು 2018 ರಲ್ಲಿ ಯಾವುದೇ ಸಾಂಸ್ಥಿಕ ಚುನಾವಣೆಗಳು ನಡೆಯದ ಕಾರಣ, 2018 ರ ತಿದ್ದುಪಡಿ ಮಾಡಿದ ಸಂವಿಧಾನವನ್ನು ಅವಲಂಬಿಸಬೇಕು ಎಂಬ ಠಾಕ್ರೆ ಗುಂಪಿನ ವಾದವನ್ನು ಅವರು ತಿರಸ್ಕರಿಸಿದರು.