ತಿರುಚ್ಚಿ (ತಮಿಳುನಾಡು): ಕೆಲವು ವರ್ಷಗಳಿಂದ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಬೇಕಾದ್ದಲ್ಲಿ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿಯೇ ಪ್ರಮುಖವಾಗಿರುತ್ತದೆ. ಹೀಗಿರುವಾಗ ತಮಿಳುನಾಡು ಮೂಲದ ಮಹಿಳೆಯೊಬ್ಬರ ಆಧಾರ್ನಲ್ಲಿ ಜನ್ಮ ದಿನಾಂಕ ತಪ್ಪಾಗಿ ನಮೂದಾಗಿದ್ದು, ಅವರು ಸರ್ಕಾರದ ಎಲ್ಲಾ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಸರ್ಕಾರದ ಯಾವುದೇ ಯೋಜನೆಗಳಿಗೆ ಆಧಾರ್ ಬಳಸದ ಪರಿಸ್ಥಿತಿ ನಿರ್ಮಾಣವಾಗಿದೆ.
ತಮಿಳುನಾಡು ತಿರುಚ್ಚಿ ಜಿಲ್ಲೆಯ ದಯನೂರು ನಿವಾಸಿಯಾಗಿರುವ ಕವಿತಾ (41) ಎಂಬವರು 1982 ರಲ್ಲಿ ಜನಿಸಿದ್ದಾರೆ. ಆದರೆ ಅವರ ಆಧಾರ್ ಕಾರ್ಡ್ನಲ್ಲಿ ಮಾತ್ರ ಹುಟ್ಟಿದ ವರ್ಷ 1900 ಎಂದು ತಪ್ಪಾಗಿ ಮುದ್ರಿಸಲಾಗಿದೆ. ಹೀಗಾಗಿ 41 ವರ್ಷ ಪ್ರಾಯದ ಅವರಿಗೆ ಆಧಾರ್ ಗುರುತಿನ ಪ್ರಕಾರ ಇದೀಗ 123 ವರ್ಷ. ಇದರಿಂದಾಗಿ ಸರ್ಕಾರದ ಯಾವುದೇ ಯೋಜನೆಗಳಿಗೆ ಅವರಿಗೆ ಆಧಾರ್ ಕಾರ್ಡ್ ಬಳಸುವಂತಿಲ್ಲ.
ಇದನ್ನೂ ಓದಿ:ನಕಲಿ ದಾಖಲೆ ಹೊಂದಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ.. ಶಾಸಕನೇ ನೀಡಿದ್ದ ರಹವಾಸಿ ಪ್ರಮಾಣಪತ್ರ!
ಹುಟ್ಟಿದ ವರ್ಷ ತಪ್ಪಾಗಿ ಮುದ್ರಿತವಾಗಿರುವುದರಿಂದ ನನಗೆ ಸರ್ಕಾರಿ ಸವಲತ್ತುಗಳನ್ನು ಪಡೆಯುವಂತಿಲ್ಲ. ಸರ್ಕಾರದ ಯಾವುದೇ ಯೋಜನೆಗಳಿಗೆ ಆಧಾರ್ ಬಳಸುವಂತಿಲ್ಲ. ಆಧಾರ್ ಮುಖ್ಯ ಗುರುತಾಗಿರುವ ಕಾರಣ ಹುಟ್ಟಿದ ವರ್ಷ ತಪ್ಪಾಗಿದ್ದು ಅಧಿಕಾರಿಗಳು ನನ್ನ ಆಧಾರ್ ಅನ್ನು ಸ್ವೀಕರಿಸುತ್ತಿಲ್ಲ ಎಂದು ಕವಿತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಕವಿತಾ ಅವರು ಆಧಾರ್ ಕಾರ್ಡ್ನಲ್ಲಿ ಹುಟ್ಟಿದ ದಿನಾಂಕ ಬದಲಾಯಿಸುವಲ್ಲಿ ವಿಫಲರಾಗಿದ್ದಾರೆ.
ಈ ವಿಷಯವಾಗಿ ಫೆಬ್ರವರಿ 27 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ನಲ್ಲಿ ತಮ್ಮ ಹುಟ್ಟಿದ ವರ್ಷವನ್ನು ಬದಲಾಯಿಸುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ ಕವಿತಾ ಅವರಲ್ಲಿ ಜನನ ಪ್ರಮಾಣಪತ್ರ ಮತ್ತು ಶಿಕ್ಷಣ ಪ್ರಮಾಣ ಪತ್ರವಿಲ್ಲ ಎಂದು ಅಧಿಕಾರಿಗಳು ಜನಿಸಿದ ವರ್ಷವನ್ನು ಬದಲಾಯಿಸಲು ನಿರಾಕರಿಸುತ್ತಿದ್ದಾರೆ. ತನ್ನ ಬಳಿ ಕೇವಲ ಮತದಾರರ ಗುರುತಿನ ಚೀಟಿ ಇದೆ. ಅದನ್ನು ಇಟ್ಟುಕೊಂಡು ಆಧಾರ್ ಮಾಹಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ನನಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಕವಿತಾ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಗುರುತಿನ ಪುರಾವೆಯಾಗಿ 'ಆಧಾರ್' ಸ್ವೀಕರಿಸುವ ಮೊದಲು ನೈಜತೆ ಪರಿಶೀಲಿಸಿ: ಯುಐಡಿಎಐ ಮಹತ್ವದ ಸಂದೇಶ