ದಾಂತೇವಾಡ (ಛತ್ತೀಸ್‌ಗಢ): ರಾಜ್ಯದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ನಕ್ಸಲರೊಂದಿಗೆ ಮಾತುಕತೆ ಸಿದ್ಧವಿದೆ ಎಂಬ ಛತ್ತೀಸ್‌ಗಢ ಸರ್ಕಾರದ ಪ್ರಸ್ತಾವನೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿಗಳು) ಎಂಬ ನಕ್ಸಲ್ ಸಂಘಟನೆ ಪ್ರತಿಕ್ರಿಯಿಸಿದೆ. ಮಾತುಕತೆಗೆ ಇಚ್ಛೆ ವ್ಯಕ್ತಪಡಿಸಿರುವ ಈ ಸಂಘಟನೆಯು ಕೆಲವು ಷರತ್ತುಗಳನ್ನೂ ಸರ್ಕಾರದ ಮುಂದಿಟ್ಟಿದೆ.
ದೇಶದ ಅತ್ಯಂತ ಕೆಟ್ಟ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಛತ್ತೀಸ್‌ಗಢ ಒಂದಾಗಿದೆ. ಹೀಗಾಗಿ ಸಂವಿಧಾನ ಮೇಲೆ ನಂಬಿಕೆ ಇಟ್ಟರೆ ನಕ್ಸಲರೊಂದಿಗೆ ಶಾಂತಿ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಒಂದು ತಿಂಗಳ ಹಿಂದೆ ಹೇಳಿತ್ತು. ಇದೀಗ ನಕ್ಸಲ್ ಸಂಘಟನೆಯು ಮಾತುಕತೆಯ ಒಲವು ತೋರಿದ್ದು, ಜೈಲಿನಲ್ಲಿರುವ ನಕ್ಸಲ್ ನಾಯಕರ ಬಿಡುಗಡೆ ಮತ್ತು ಕಲಹ ಪೀಡಿತ ಪ್ರದೇಶಗಳಿಂದ ಭದ್ರತಾ ಪಡೆಗಳ ಹಿಂಪಡೆಯುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.