ಗೊಂಡಾ (ಯುಪಿ):ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯೂಎಫ್‌ಐ) ಮುಖ್ಯಸ್ಥರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪದ ಮೇಲೆ ಸುಳ್ಳು ಪತ್ತೆ ಮಾಡುವ ನಾರ್ಕೋ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಭಾನುವಾರ ಹೇಳಿದ್ದಾರೆ. ಆದರೆ, ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಕೂಡ ಅದೇ ಪರೀಕ್ಷೆಗೆ ಒಳಗಾಗಬೇಕು ಎಂದು ಸಿಂಗ್ ಷರತ್ತು ವಿಧಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಪ್ರತಿಭಟನಾನಿರತ ಕುಸ್ತಿಪಟುಗಳು ಸಿಂಗ್ ವಿರುದ್ಧ ಮಹಿಳಾ ಗ್ರಾಪ್ಲರ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿದ್ದರು. ಅಲ್ಲದೇ ಅವರು ನಿರಪರಾಧಿ ಎಂಬ ವಿಶ್ವಾಸವಿದ್ದರೆ ಸುಳ್ಳು ಪತ್ತೆ ಮಾಡುವ ನಾರ್ಕೋ ಪರೀಕ್ಷೆಗೆ ಒಳಗಾಗುವಂತೆ ಸವಾಲು ಹಾಕಿದ್ದರು.
"ಇದಕ್ಕೆ ಪ್ರತಿಕ್ರಿಸಿದ ಸಿಂಗ್ ನಾನು ನಾರ್ಕೋ ಪರೀಕ್ಷೆ, ಪಾಲಿಗ್ರಾಫ್ ಪರೀಕ್ಷೆ ಅಥವಾ ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧನಿದ್ದೇನೆ. ಆದರೆ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕೂಡ ಅದೇ ಪರೀಕ್ಷೆಗೆ ಒಳಗಾಗಬೇಕೆಂದು ನನಗೆ ಷರತ್ತು ಇದೆ. ಇಬ್ಬರೂ ಕುಸ್ತಿಪಟುಗಳು ತಮ್ಮ ಪರೀಕ್ಷೆಗಳಿಗೆ ಸಿದ್ಧರಾಗಿದ್ದರೆ, ಅವರು ಮಾಧ್ಯಮಗೋಷ್ಠಿ ಕರೆದು ಘೋಷಣೆ ಮಾಡಬೇಕು. ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ. ನಾನು ಇಂದಿಗೂ ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಮತ್ತು ದೇಶವಾಸಿಗಳಿಗೆ ಶಾಶ್ವತವಾಗಿ ದೃಢವಾಗಿರಲು ಭರವಸೆ ನೀಡುತ್ತೇನೆ. ಜೈ ಶ್ರೀ ರಾಮ್" ಎಂದು ಸಿಂಗ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳ ದೂರು ಸಲ್ಲಿಸಿದ ನಂತರ ದೆಹಲಿ ಪೊಲೀಸರು ಕಳೆದ ತಿಂಗಳು ಸಿಂಗ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾದ ನಂತರ, ಸಿಂಗ್ ಅವರು ತನಿಖೆ ಎದುರಿಸಲು ಸಿದ್ಧ. ಆದರೆ ತಮ್ಮ ಡಬ್ಲ್ಯೂಎಫ್‌ಐ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು.
ಸಿಂಗ್ ವಿರುದ್ಧ ಲೈಂಗಿಕ ಅಪರಾಧದ ಆರೋಪದ ಮೇಲೆ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ಅರ್ಜಿಯ ಕುರಿತು ದೆಹಲಿ ಪೊಲೀಸರು ಸ್ಥಿತಿ ವರದಿಯನ್ನು ಸಲ್ಲಿಸಿದ್ದಾರೆ .ಈ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಕೈಸರ್‌ಗಂಜ್‌ನ ಬಿಜೆಪಿ ಸಂಸದರಾದ ಸಿಂಗ್ ಉತ್ತರ ಪ್ರದೇಶದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಸದ್ಯ ಅವರು ಗೊಂಡಾ, ಅಯೋಧ್ಯೆ, ಬಹ್ರೈಚ್ ಮತ್ತು ಬಸ್ತಿ ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ. ಅಲ್ಲಿ ಅವರು ನಿಯಮಿತವಾಗಿ ತಮ್ಮ ಬೆಂಬಲಿಗರನ್ನು ಭೇಟಿಯಾಗುತ್ತಿದ್ದಾರೆ.
ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಏಪ್ರಿಲ್ 23 ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದ ಸಿಂಗ್ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಂಗ್ ಭಾನುವಾರ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನೂ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು "ಯಾರ ಯಶಸ್ಸಿಗೆ ನಾನು ಸರ್ವಸ್ವ ತ್ಯಾಗ ಮಾಡಿದ್ದೆನೋ ಆ ಮಕ್ಕಳು ಇಂದು ರಾಜಕೀಯದ ಆಟಿಕೆಗಳಾಗಿ ಮಾರ್ಪಟ್ಟಿರುವುದು ದುರದೃಷ್ಟಕರ. ನಾಲ್ಕು ತಿಂಗಳು ಕಳೆದರೂ ನನ್ನ ಮೇಲಿನ ಆರೋಪ ಸಾಬೀತು ಪಡಿಸಲು ಅವರ ಬಳಿ ಆಡಿಯೋ, ವಿಡಿಯೋ ಅಥವಾ ಇನ್ಯಾವುದೇ ರೆಕಾರ್ಡಿಂಗ್ ಇಲ್ಲ. ಕಥೆ ಹೇಳುತ್ತಿದ್ದಾರೆ. ಇಡೀ ದೇಶವೇ ಇಂದು ಸಿಟ್ಟಿಗೆದ್ದಿದೆ ಎಂಬುದು ಅವರಿಗೆ ತಿಳಿಯಬೇಕು. ಎಲ್ಲ ಜಾತಿ, ಧರ್ಮದ ಜನರು ನನ್ನೊಂದಿಗೆ ನಿಂತಿದ್ದಾರೆ" ಎಂದು ಸಿಂಗ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಕುಸ್ತಿಪಟುಗಳ ಆರೋಪದ ತನಿಖೆ ಪೂರ್ಣಗೊಳ್ಳುವವರೆಗೆ ತಕ್ಷಣವೇ ಜಾರಿಗೆ ಬರುವಂತೆ ಕುಸ್ತಿ ಫೆಡರೇಶನ್‌ನ ಎಲ್ಲಾ ಚಟುವಟಿಕೆಗಳನ್ನು ಕ್ರೀಡಾ ಸಚಿವಾಲಯ ರದ್ದುಗೊಳಿಸಿದೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ:WFI ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿಚಾರಣೆ