ನವದೆಹಲಿ: ಅತ್ಯಾಚಾರ ಕುರಿತಂತೆ ಕರ್ನಾಟಕದ ವಿಧಾನಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಹೇಳಿಕೆ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ, ಸಚಿವೆ ಸ್ಮೃತಿ ಇರಾನಿ, ಎಸ್ಪಿ ಸಂಸದೆ ಜಯಾ ಬಚ್ಚನ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ - ತೇಜಸ್ವಿ ಸೂರ್ಯ, ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೆಂಡಕಾರಿದ್ದಾರೆ.
ವಿವಾದಾತ್ಮಕ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಜಯಾ ಬಚ್ಚನ್, ಇದು ನಾಚಿಕೆಗೇಡಿನ ಸಂಗತಿ. ಸದನದಲ್ಲಿ ಇನ್ನು ಮುಂದೆ ಯಾರೂ ಈ ರೀತಿ ಮಾತನಾಡದಂತೆ ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ರಮೇಶ್ ಕುಮಾರ್ ಜೀ ಅವರ ಹೇಳಿಕೆ ಅತ್ಯಂತ ಆಕ್ಷೇಪಾರ್ಹವಾಗಿದೆ. ಸಭಾಪತಿಯಾಗಿದ್ದಾಗ ಅವರು ಈ ಹಿಂದೆಯೂ ಅತ್ಯಾಚಾರದ ಬಗ್ಗೆ ಇಂತಹ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಇಂದು ಯುವಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಧಾನಸಭೆಯಲ್ಲಿ ಪದೇ ಪದೇ ಇಂತಹ ಹೇಳಿಕೆ ನೀಡುವವರ ಬಗ್ಗೆ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಒತ್ತಾಯ ಮಾಡಿದ್ದಾರೆ.
ವಿವಾದಾತ್ಮಕ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ಇಂತಹ ಸಣ್ಣ ಮತ್ತು ಕೀಳು ಮಟ್ಟದ ಹೇಳಿಕೆ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ಸಂತ್ರಸ್ತರು ಅನುಭವಿಸುವ ಮಾನಸಿಕ ಆಘಾತದ ಬಗ್ಗೆ ಈ ರೀತಿಯ ಹೇಳಿಕೆ ಸಲ್ಲದು. ರಮೇಶ್ ಕುಮಾರ್ ಅವರು ಮಾತನಾಡುತ್ತಿದ್ದರೂ ಸ್ಪೀಕರ್ ನಗುತ್ತಿದ್ದರು.
ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಹೇಳಿಕೆ ನೀಡುವವರಿಗೆ ಪಾಠವಾಗುವಂತೆ ಕ್ರಮ ಕೈಗೊಳ್ಳಿ ಎಂದು ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಕಿಡಿ ಕಾರಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಕೂಡ ರಮೇಶ್ ಕುಮಾರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್, ಉತ್ತರ ಪ್ರದೇಶದಲ್ಲಿ ಲಡ್ಕಿ ಹೂ, ಲಡ್ ಸಕ್ತಿ ಹೂ ಎಂಬ ಘೋಷಣೆಗಳನ್ನು ಕೂಗುವ ಮೊದಲು ಕಾಂಗ್ರೆಸ್ ರಮೇಶ್ ಕುಮಾರ್ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ರಮೇಶ್ ಕುಮಾರ್ ಅವರ 'ಅತ್ಯಾಚಾರ' ಹೇಳಿಕೆ ಖಂಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ (NCW) ಅಧ್ಯಕ್ಷೆ ರೇಖಾ ಶರ್ಮಾ, ಜನರಿಗಾಗಿ ಉತ್ತಮ ಕಾನೂನುಗಳನ್ನು ರೂಪಿಸುವವರು ಇವರೇ. ಆದರೆ, ಇಂಥವರೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರಿಂದ ಜನರ ಒಳಿತನ್ನು ನಿರೀಕ್ಷಿಸುವುದು ಹೇಗೆ ಎಂದಿದ್ದಾರೆ.
ಒಂದು ಕಡೆ ಕಾನೂನು ರೂಪಿಸಿ ಸಮಾಜ ಬಲವರ್ಧನೆ ಮಾಡುವವರು ಇವರೇ, ಇನ್ನೊಂದು ಕಡೆ ಅತ್ಯಾಚಾರವನ್ನು ಉತ್ತೇಜಿಸುವವರು ಇವರೇ. ಇಂಥವರಿಗೆ ಪಕ್ಷ ಟಿಕೆಟ್ ನೀಡಬಾರದು, ನೀಡಿದರೂ ಜನರು ಮತ ಹಾಕಿ ಇಂಥವರನ್ನು ಆಯ್ಕೆ ಮಾಡಬಾರದು ಎಂದು ಮತದಾರರಿಗೂ ಅವರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅತ್ಯಾಚಾರದ ಕುರಿತ ಹೇಳಿಕೆ.. ಮಹಿಳೆಯರಿಗೆ ನೋವಾಗಿದ್ರೇ ಪ್ರಾಮಾಣಿಕವಾಗಿ ಕ್ಷಮೆ ಕೋರುವೆ.. ರಮೇಶ್ ಕುಮಾರ್