ನವದೆಹಲಿ:ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ಆರಂಭಿಸಿ ವರ್ಷ ಕಳೆದಿದ್ದು, ಇನ್ನೂ ಅನ್ನದಾತರ ಸಮಸ್ಯೆ ಬಗೆಹರಿಸದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 85 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಪಿಎಂ ಮೋದಿ ಮಾಡಿದ್ದು ಕೇವಲ ಭಾಷಣ. ರೈತರ ಸಮಸ್ಯೆಯನ್ನ ಅವರು ಬಗೆಹರಿಸಲೇ ಇಲ್ಲ. ಒಂದು ವರ್ಷದಿಂದ ರೈತರ ಹೋರಾಟ ನಡೆಯುತ್ತಲೇ ಇದೆ. ಇದರ ಬಗ್ಗೆ ಮಾತಾಡಿಲ್ಲ. ಅನ್ನದಾತರಿಗಾಗಿ ಮೋದಿ ಹೇಳಿದ್ದೇನೂ ಜಾರಿಗೆ ಬಂದಿಲ್ಲ. ಆರಂಭದಿಂದಲೂ ಉದ್ಯೋಗದ ಭರವಸೆ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ. ಇರುವ ಸಮಸ್ಯೆಗಳನ್ನೇ ಬಗೆಹರಿಸಿಲ್ಲ, ನೀಡಿದ ಭರವಸೆಗಳನ್ನೇ ಇನ್ನೂ ಪೂರೈಸಿಲ್ಲ. ಅದನ್ನು ಬಿಟ್ಟು ಈಗಲೇ 100ನೇ ವರ್ಷದ ಸ್ವಾತಂತ್ರ್ಯ ದಿನದ ಬಗ್ಗೆ ಮಾತನಾಡುತ್ತಾರೆ ಎಂದರು.