ರೋಹ್ಟಕ್ (ಹರ್ಯಾಣ) : ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ತಮ್ಮ ತಂದೆಯ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಬೆನ್ನಲ್ಲೇ ಇವರ ಮಾಜಿ ಪತಿ ನವೀನ್ ಜೈಹಿಂದ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ವಾತಿ ಮಲಿವಾಲ್ ಮಾರ್ಚ್ 11 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ತಂದೆಯ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಬಳಿಕ ತನ್ನ ತಾಯಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಅಜ್ಜಿಯರ ಸಹಾಯದಿಂದ ಈ ನೋವಿನಿಂದ ಹೊರಬರಲು ಸಾಧ್ಯವಾಯಿತು ಎಂದು ಹೇಳಿದ್ದರು.
ಈ ಬಗ್ಗೆ ಭಾನುವಾರ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ನವೀನ್ ಜೈಹಿಂದ್, ಅವರ ತಂದೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಸ್ವಾತಿ ಮಲಿವಾಲ್ ನನ್ನೊಂದಿಗೆ ಚರ್ಚಿಸಿಯೇ ಇಲ್ಲ. ಆದರೆ,ಅವರು ತಮ್ಮ ತಂದೆ ಹೊಡೆಯುತ್ತಿದ್ದರು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯದ ವಿಷಯವು ನಮ್ಮ ನಡುವೆ ಎಂದಿಗೂ ಮುನ್ನೆಲೆಗೆ ಬಂದಿಲ್ಲ. ಈ ಆರೋಪ ಸಂಬಂಧ ಸ್ವಾತಿ ಮಲಿವಾಲ್ ಅವರಿಗೆ ನಾರ್ಕೋ ಮತ್ತು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇನ್ನು, ಸ್ವಾತಿ ಮಲಿವಾಲ್ ಅವರು ತನ್ನ ತಂದೆ ವಿರುದ್ಧ ಮಾಡಿರುವ ಆರೋಪಗಳು ತುಂಬಾ ಗಂಭೀರತೆಗಳಿಂದ ಕೂಡಿವೆ. ಅವರ ತಂದೆ ಮಾಜಿ ಸೈನಿಕರಾಗಿದ್ದು, ಅವರು ನಿಧನರಾಗಿ ಸುಮಾರು 20 ವರ್ಷಗಳು ಕಳೆದಿವೆ. ಈ ಬಗ್ಗೆ ಸ್ವಾತಿ ಅವರೇ ನಿಜ ಸಂಗತಿಗಳನ್ನು ತಿಳಿಸಬೇಕು. ಇವರ ನಡುವೆ ತಂದೆ ಮತ್ತು ಮಗಳ ಸಂಬಂಧ ಇತ್ತು ಎಂದು ನಾನು ನಂಬುತ್ತೇನೆ. ಈಗ ಜನರಿಗೆ ಯಾವುದೇ ತಪ್ಪು ಸಂದೇಶ ಹೋಗಬಾರದು. ಈ ಸಂಬಂಧ ಅವರೇ ನಾರ್ಕೋ ಟೆಸ್ಟ್ ಮಾಡಿಸಿ, ಸುಳ್ಳು ಪತ್ತೆ ಪರೀಕ್ಷೆ ಮಾಡಿಸಿ ವರದಿಯನ್ನು ಬಹಿರಂಗಪಡಿಸಲಿ ಎಂದು ಮಾಜಿ ಪತಿ ಒತ್ತಾಯಿಸಿದ್ದಾರೆ.