ನವದೆಹಲಿ:ಮಹಿಳಾ ಪ್ರೀಮಿಯರ್ ಲೀಗ್ 2023ರ ಚೊಚ್ಚಲ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈ ನಗರದಲ್ಲಿ ನಡೆಯಿತು. ಹರಾಜು ಪ್ರಕ್ರಿಯೆಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹೆಚ್ಚಿನ ಮೊತ್ತಕ್ಕೆ ಆರ್ಸಿಬಿ ತಂಡದ ಪಾಲಾಗುವ ಮೂಲಕ ಲೀಗ್ನ ದುಬಾರಿ ಆಟಗಾರ್ತಿಯಾಗಿದ್ದಾರೆ. ಸುಮಾರು 3.40 ಕೋಟಿ ರೂ.ಗೆ ಆರ್ಸಿಬಿ ತಂಡಕ್ಕೆ ಬಿಕರಿ ಆಗಿದ್ದಾರೆ ಸ್ಮೃತಿ ಮಂದಾನ. ಅಲ್ಲದೇ ಚೊಚ್ಚಲ ಲೀಗ್ನಲ್ಲೇ ಕೆಲವು ಸ್ಟಾರ್ ಆಟಗಾರ್ತಿಯರನ್ನ ಆರ್ಸಿಬಿ ತಂಡ ಖರೀದಿಸಿದೆ.
12 ಕೋಟಿ ಮಿತಿಯ ಹರಾಜಿನಲ್ಲಿ 11.09 ಕೋಟಿ ರೂ. ಖರ್ಚ ಮಾಡಿ ಒಟ್ಟು 18 ಆಟಗಾರ್ತಿಯರನ್ನು ಖರೀದಿ ಮಾಡಿರುವ ಆರ್ಸಿಬಿ ತಂಡ ಇನ್ನೂ 10 ಲಕ್ಷ ರೂ.ವನ್ನು ತನ್ನ ಅಕೌಂಟ್ನಲ್ಲಿ ಉಳಿಸಿಕೊಂಡಿದೆ. ಇದರಲ್ಲಿ 12 ಭಾರತೀಯ ಮತ್ತು 6 ವಿದೇಶಿ ಆಟಗಾರ್ತಿಯರನ್ನು ತಂಡ ಒಳಗೊಂಡಿದೆ. ಸ್ಮೃತಿ ಮಂದಾನಗೆ 3.40 ಕೋಟಿ ರೂಪಾಯಿ ಘೋಷಿಸಿರುವ ತಂಡ, ದಿಶಾ ಕಸತ್ ಅವರಿಗೆ 10 ಲಕ್ಷ ರೂ. ನೀಡಿ ಖರೀದಿ ಮಾಡುವ ಮೂಲಕ ಬ್ಯಾಟಿಂಗ್ ವಿಭಾಗಕ್ಕೆ ಸೇರ್ಪಡೆ ಮಾಡಿಕೊಂಡಿದೆ. ವಿಕೆಟ್ ಕೀಪರ್ ಆಗಿ ರಿಚಾ ಘೋಷ್ ಅವರನ್ನು 1.90 ಕೋಟಿಗೆ ಖರೀದಿ ಮಾಡಿದ್ದು, 10 ಲಕ್ಷ ರೂಪಾಯಿ ನೀಡಿ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಇಂದ್ರಾಣಿ ರಾಯ್ಗೆ ಮಣೆ ಹಾಕಿದೆ.
ಬೌಲಿಂಗ್ ವಿಭಾಗದಲ್ಲೂ 5 ಸ್ಟಾರ್ ಆಟಗಾರ್ತಿಯರನ್ನು ಖರೀದಿ ಮಾಡುವ ಮೂಲಕ ಬೌಲಿಂಗ್ಗೆ ಹೆಚ್ಚಿನ ಒತ್ತು ಕೊಟ್ಟಿದೆ ಆರ್ಸಿಬಿ. ರೇಣುಕಾ ಸಿಂಗ್ಗೆ 1.50 ಕೋಟಿ ರೂ ಕೊಟ್ಟು ಖರೀದಿ ಮಾಡಿದ್ದು, ಈ ಮೂಲಕ ರೇಣುಕಾ ತಂಡದ ದುಬಾರಿ ಬೌಲರ್ ಆಗಿದ್ದಾರೆ. ಇನ್ನುಳಿದಂತೆ ಪ್ರೀತಿ ಬೋಸ್ಗೆ 30 ಲಕ್ಷ ರೂ, ಕೋಮಲ್ ಜೈಂಜದ್ 25 ಲಕ್ಷ ರೂ, ಸಹನಾ ಪವರ್ 10 ಲಕ್ಷ ರೂ, ಆಸ್ಟ್ರೇಲಿಯಾದ ಮೇಗನ್ಗೆ 40 ಲಕ್ಷ ರೂಗೆ ತಂಡ ಖರೀದಿ ಮಾಡಿದೆ.