ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಾಳೆ ಐಪಿಎಲ್ ಪಂದ್ಯ ನಡೆಯಲಿದೆ. ಆರ್‌ಸಿಬಿ ತಂಡ ಈಗಾಗಲೇ ಹೈದರಾಬಾದ್ ತಲುಪಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಇದರ ನಡುವೆ ನಿನ್ನೆ(ಮಂಗಳವಾರ) ಹೈದರಾಬಾದ್‌ನ ಫಿಲ್ಮ್ ನಗರದ ಜೂಬ್ಲಿ ಹಿಲ್ಸ್‌ನಲ್ಲಿರುವ ಮೊಹಮ್ಮದ್ ಸಿರಾಜ್ ಅವರ ನೂತನ ನಿವಾಸಕ್ಕೆ ವಿರಾಟ್ ಕೊಹ್ಲಿ ಮತ್ತು ತಂಡದ ಸದಸ್ಯರು ಭೇಟಿ ನೀಡಿದರು.
ಸಾಮಾಜಿಕ ಮಾಧ್ಯಮದಲ್ಲಿ ಆರ್‌ಸಿಬಿ ಆಟಗಾರರು ಸಿರಾಜ್ ಮನೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಸೇರಿದಂತೆ ತಂಡದ ಇತರೆ ಸದಸ್ಯರು ಇದ್ದಾರೆ. ಸಿರಾಜ್ ಮನೆಗೆ ವಿರಾಟ್ ಕೊಹ್ಲಿ ಆಗಮಿಸುವ ಸುದ್ದಿ ತಿಳಿದು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳಲು ಜಮಾಯಿಸಿದ್ದರು.
ಇದನ್ನೂ ಓದಿ :ಮುಂಬೈ ವಿರುದ್ಧ ಲಕ್ನೋಗೆ 5 ರನ್‌ಗಳ ಗೆಲುವು : ಅಬ್ಬರಿಸಿದ ಸ್ಟೋಯಿನಿಸ್
ಆರ್‌ಸಿಬಿ ಫ್ರಾಂಚೈಸಿ ಕೂಡಾ ಫೋಟೋಗಳನ್ನು ತನ್ನ ಟ್ವಿಟರ್ ಅಕೌಂಟ್ನಲ್ಲಿ ಹಂಚಿಕೊಂಡಿದೆ. "ಹೈದರಾಬಾದ್ ಬಿರಿಯಾನಿ ಸಮಯ! ನಿನ್ನೆ ರಾತ್ರಿ ಮಿಯಾನ್ ಅವರ ಸುಂದರವಾದ ಹೊಸ ಮನೆಯಲ್ಲಿ ನಮ್ಮ ಹುಡುಗರು ಪಿಟ್‌ಸ್ಟಾಪ್ ತೆಗೆದುಕೊಂಡರು" ಎಂಬ ಹೆಡ್‌ಲೈನ್ ಕೊಟ್ಟಿದೆ. ಇನ್ನೊಂದೆಡೆ, ವಿರಾಟ್ ಮೇಲಿನ ಮೊಹಮ್ಮದ್ ಸಿರಾಜ್ ಅವರ ಅಭಿಮಾನಕ್ಕೆ ಕೊಹ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.