ನವದೆಹಲಿ: ಮುಂದಿನ ವಾರದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ಬಡ್ಡಿದರಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಈ ಅಂದಾಜನ್ನು ಆಕ್ಸಿಸ್ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಸೌಗತ ಭಟ್ಟಾಚಾರ್ಯ ವ್ಯಕ್ತಪಡಿಸಿದ್ದಾರೆ. ಈ ಬಾರಿ ಪಾಲಿಸಿ ಬಡ್ಡಿದರಗಳಲ್ಲಿ ಅಂದರೆ ರೆಪೋ ದರದಲ್ಲಿ ಈ ಹೆಚ್ಚಳವು 0.35 ರಿಂದ 0.50 ಬೇಸಿಸ್ ಪಾಯಿಂಟ್‌ಗಳಾಗಿರಬಹುದು ಎಂದಿದ್ದಾರೆ.
ಮುಂದಿನ ವಾರದ ಈ ಹೆಚ್ಚಳದ ನಂತರವೂ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
ಅಮೆರಿಕ ಫೆಡರಲ್ ಬ್ಯಾಂಕ್ ಸಹ ಈ ರೀತಿ ಮಾಡಿತ್ತು: ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ರೆಪೊ ದರ ಶೇ.5.75ಕ್ಕೆ ಏರಿಕೆಯಾಗಲಿದೆಯಂತೆ. ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪರಿಶೀಲನಾ ಸಭೆ ಈಗ ಆಗಸ್ಟ್ 3 ರಿಂದ 5 ರವರೆಗೆ ನಡೆಯಲಿದೆ. ಈ ಮೊದಲು ಈ ಸಭೆ ಆಗಸ್ಟ್ 2 ರಿಂದ 4 ರವರೆಗೆ ನಡೆಯಬೇಕಿತ್ತು. ಹೊಸ ಬಡ್ಡಿದರಗಳ ಘೋಷಣೆಯನ್ನು ಆಗಸ್ಟ್ 5 ರಂದು ಮಾಡಬಹುದಾಗಿದೆ . ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಕೂಡ ಬುಧವಾರದಂದು ಶೇಕಡಾ 0.75 ರಷ್ಟು ಬಡ್ಡಿದರಗಳನ್ನು ಹೆಚ್ಚಿಸಿದೆ.
ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ ದರ :ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಮೇ ಮತ್ತು ಜೂನ್‌ನಲ್ಲಿ ಸತತ ಎರಡು ಬಾರಿ ಬಡ್ಡಿದರಗಳನ್ನು ಹೆಚ್ಚಿಸಿದೆ. ಮೇ ತಿಂಗಳಲ್ಲಿ ಬಡ್ಡಿದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದರೆ, ಜೂನ್‌ನಲ್ಲಿ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿತ್ತು. ಈ ಹೆಚ್ಚಳದ ನಂತರ ಪ್ರಸ್ತುತ ರೆಪೋ ದರವು ಶೇಕಡಾ 4.90 ಕ್ಕೆ ತಲುಪಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ ದರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಸೌಗತ ಭಟ್ಟಾಚಾರ್ಯ ಅವರ ಅಂದಾಜು ನಿಜವಾದರೆ ರೆಪೊ ದರವು 5.25 ರಿಂದ 5.40 ಕ್ಕೆ ಹೆಚ್ಚಾಗಬಹುದು.