ಮುಂಬೈ: ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-1949 ಸೆಕ್ಷನ್ 19 (2) ಅನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 1 ಕೋಟಿ ರೂ. ವಿತ್ತೀಯ ದಂಡ ವಿಧಿಸಿ ನವೆಂಬರ್ 16ರಂದೇ ಆದೇಶ ಹೊರಡಿಸಿದೆ.
"ಈ ಕ್ರಮವು ನಿಯಂತ್ರಕ ನಿಯಮಾವಳಿಯಲ್ಲಿನ ನ್ಯೂನ್ಯತೆಗಳನ್ನು ಆಧರಿಸಿದೆ ಮತ್ತು ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವಕ್ಕೆ ಇದು ಸಂಬಂಧಪಟ್ಟಿಲ್ಲ" ಎಂದು ಆರ್‌ಬಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 31, 2018 ಮತ್ತು ಮಾರ್ಚ್ 31, 2019 ರ ಬ್ಯಾಂಕ್ನ ಹಣಕಾಸಿನ ಸ್ಥಿತಿಗಳನ್ನು ಉಲ್ಲೇಖಿಸಿರುವ ಆರ್‌ಬಿಐ, ತಪಾಸಣೆ ನಡೆಸಿದ ನಂತರ ಅವ್ಯವಹಾರಗಳನ್ನು ಗುರುತಿಸಲಾಗಿದೆ. ಇದಕ್ಕೆ ಸಂಬಂಧಿತ ಪತ್ರವ್ಯವಹಾರಗಳು ಕಾಯ್ದೆಯ ಸೆಕ್ಷನ್ 19 (2)ರ ಉಲ್ಲಂಘನೆಯಾಗಿದೆ ಎಂದು ಹೇಳಿದೆ.