ಕನೂರ್(ತಮಿಳುನಾಡು): ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡಿದ್ದು, ತಮಿಳುನಾಡಿನ ನೀಲಗಿರಿಯ ಕನೂರ್ ಬಳಿ ಈ ಅವಘಡ ನಡೆದಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಹಲವು ಮೃತದೇಹಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಪ್ರತ್ಯಕ್ಷದರ್ಶಿಗಳು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಅವಘಡದ ಬಗ್ಗೆ ಪ್ರತ್ಯಕ್ಷದರ್ಶಿ ನೀಡಿರುವ ಮಾಹಿತಿ ಪ್ರಕಾರ, ಹೆಲಿಕಾಪ್ಟರ್ ಮರಗಳಿಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ನೆಲಕ್ಕೆ ಅಪ್ಪಳಿಸಿದೆ ಎಂದಿದ್ದಾರೆ. ಹೆಲಿಕಾಪ್ಟರ್ ಪತನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ವಿಮಾನದಲ್ಲಿದ್ದವರನ್ನ ರಕ್ಷಣೆ ಮಾಡಲು ಮುಂದಾಗಿದ್ದಾಗಿ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ಮಾತನಾಡಿ, ಮೊದಲು ಭಾರಿ ಸದ್ದು ಕೇಳಿಸಿತು. ಏನಾಯ್ತು ಎಂದು ಹೊರಗಡೆ ಬಂದು ನೋಡಿದಾಗ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆಯಿತು. ಈ ವೇಳೆ ದೊಡ್ಡ ಗಾತ್ರದಲ್ಲಿ ಬೆಂಕಿ ಕಾಣಿಸಿಕೊಂಡು ಹೆಲಿಕಾಪ್ಟರ್ ಕೆಳಕ್ಕೆ ಅಪ್ಪಳಿಸಿತು. ಹೆಲಿಕಾಪ್ಟರ್ನಿಂದ ಕೆಲವರು ಹೊರಬರುತ್ತಿದ್ದು, ಅವರಿಗೆ ಬೆಂಕಿ ಹೊತ್ತಿಕೊಂಡಿತ್ತು ಎಂದಿದ್ದಾರೆ. ಘಟನೆ ಬಗ್ಗೆ ತಕ್ಷಣವೇ ಇತರರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಸಹಾಯ ಮಾಡಲು ತೆರಳಿದ್ದಾಗಿ ಕೃಷ್ಣಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.