ಈರೋಡ್ (ತಮಿಳುನಾಡು):ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ರವಿಶಂಕರ್ ಮತ್ತು ಇತರ ಇಬ್ಬರು ಖಾಸಗಿ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ಸತ್ಯಮಂಗಲದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂದು ಬೆಳಗ್ಗೆ 10.50ರ ಸುಮಾರಿಗೆ ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ರವಿಶಂಕರ್ ಗುರೂಜಿ ಸೇರಿದಂತೆ ಹೆಲಿಕಾಪ್ಟರ್ನಲ್ಲಿದ್ದ ಎಲ್ಲರೂ ಸಹ ಸುರಕ್ಷಿತವಾಗಿದ್ದಾರೆ. ತುರ್ತು ಭೂಸ್ಪರ್ಶದ 30 ನಿಮಿಷಗಳ ನಂತರ ಎಂದರೆ 11.20ರ ಸುಮಾರಿಗೆ ಆಕಾಶವು ತಿಳಿಯಾದಾಗ ಹೆಲಿಕಾಪ್ಟರ್ ಮತ್ತೆ ಟೇಕ್ ಆಫ್ ಆಯಿತು ಎಂದು ತಿಳಿದು ಬಂದಿದೆ.
ಹುಲಿ ಸಂರಕ್ಷಿತ ಪ್ರದೇಶ:ರವಿಶಂಕರ್ ಗುರೂಜಿ ಮತ್ತವರ ಇಬ್ಬರು ಸಹಾಯಕರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ತಿರುಪುರ್ ಗಂಗೆಯಂ ಮೂಲಕ ತಿರುವನಂತಪುರಕ್ಕೆ ತೆರಳುತ್ತಿದ್ದರು. ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ ಉಗಿನಿಯಂ ಗ್ರಾಮದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತು. ದಟ್ಟ ಮಂಜಿನಿಂದಾಗಿ ಹೆಲಿಕಾಪ್ಟರ್ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಅರಣ್ಯದ ಮಧ್ಯೆಯಲ್ಲಿದ್ದ ಈ ಗ್ರಾಮದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಯಿತು. ರವಿಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗಿರುವ ವಿಷಯ ತಿಳಿದು ಸುತ್ತ-ಮುತ್ತಲಿನ ಜನರು ಸ್ಥಳಕ್ಕೆ ದೌಡಾಯಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕರು ಹೆಲಿಕಾಪ್ಟರ್ ಬಳಿ ಬಂದು ಜಮಾಯಿಸಿದರು. ಈ ವೇಳೆ ಜನರ ಮಧ್ಯೆಯೇ ರವಿಶಂಕರ್ ಗುರೂಜಿ ಇದ್ದರು.