ಕೋಲ್ಕತ್ತಾ (ಪಶ್ಚಿಮ ಬಂಗಾಳ):ರಾಜಧಾನಿದೆಹಲಿಯಲ್ಲಿರುವ ರಾಷ್ಟ್ರಪತಿ ಭವನ ಹಾಗೂ ರಾಷ್ಟ್ರೀಯ ಯುದ್ಧ ಸ್ಮಾರಕ ಸೇರಿದಂತೆ ದೇಶದ ವಿವಿಧ ಪ್ರದೇಶಗಳ ಮೇಲೆ ಪಾಕಿಸ್ತಾನದ ಉಗ್ರರು ಕೆಂಗಣ್ಣು ಬೀರಿದ್ದಾರೆ. ರಹಸ್ಯ ಮೂಲಗಳ ಮಾಹಿತಿ ಆಧರಿಸಿ ಬಿಹಾರದ ಪಾಕಿಸ್ತಾನಿ ಗೂಢಚಾರಿಯನ್ನು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ ಬಂಧಿಸಿದೆ. ಕೋಲ್ಕತ್ತಾ ಪೊಲೀಸರು ಆರೋಪಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದು, ಆತಂಕಕಾರಿ ವಿಷಯಗಳು ಬಯಲಾಗಿವೆ.
ಕೋಲ್ಕತ್ತಾ ಪೊಲೀಸ್ ಎಸ್‌ಟಿಎಫ್‌ನ ವಿಶೇಷ ಘಟಕವು ಬಿಹಾರದಲ್ಲಿ ಭಕ್ತ ಬನ್ಶಿ ಝಾ ಎಂಬಾತನ ಮನೆಯಲ್ಲಿ ಶೋಧ ನಡೆಸಿ ಆತನನ್ನು ಬಂಧಿಸಿದೆ. ಮೂಲಗಳ ಪ್ರಕಾರ, ಈ ಕುರಿತು ದೆಹಲಿ ಪೊಲೀಸರು ಕೂಡಾ ಈಗಾಗಲೇ ಕೋಲ್ಕತ್ತಾ ಪೊಲೀಸ್ ಎಸ್‌ಟಿಎಫ್‌ನೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಅಗತ್ಯಬಿದ್ದರೆ, ದೆಹಲಿ ಪೊಲೀಸರು ಬಂಧಿತ ಭಕ್ತ ಬನ್ಶಿ ಜಾನ್‌ನನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಲಿದ್ದಾರೆ.
ಆರೋಪಿಯು ಚೆನ್ನೈ, ಕೋಲ್ಕತ್ತಾ, ದೆಹಲಿಯಲ್ಲಿ ರಹಸ್ಯವಾಗಿ ಚಿತ್ರಗಳನ್ನು ತೆಗೆದು ಪಾಕಿಸ್ತಾನಿ ಮಹಿಳೆಗೆ ಕಳುಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಕೋಲ್ಕತ್ತಾ ಪೊಲೀಸ್‌ನ ಎಸ್‌ಟಿಎಫ್‌ನ ಉಸ್ತುವಾರಿ ಪೊಲೀಸ್ ಅಧಿಕಾರಿಯೊಬ್ಬರು, ''ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ವಿವಿಧ ಚಿತ್ರಗಳನ್ನು ಆರೋಪಿಯಿಂದ ಪಡೆದುಕೊಳ್ಳಲಾಗಿದೆ. ಅವುಗಳಲ್ಲಿ ರಾಷ್ಟ್ರಪತಿ ಭವನ, ದೆಹಲಿಯ ವಾರ್ ಆಫ್ ಮೆಮೋರಿಯಲ್ ಸೇರಿದಂತೆ ಪ್ರಮುಖ ಹಾಗೂ ಸಂರಕ್ಷಿತ ಪ್ರದೇಶಗಳ ಫೋಟೋಗಳು ಮತ್ತು ವಿಡಿಯೋಗಳಿವೆ. ಇದರಿಂದ ದೇಶದ ವಿವಿಧ ಪ್ರಮುಖ ಸ್ಥಳಗಳು ಐಸಿಸ್ ಉಗ್ರ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿವೆ ಎಂದು ತಿಳಿಸಿದ್ದಾರೆ.