ಕೋಲ್ಕತ್ತಾ (ಪಶ್ಚಿಮ ಬಂಗಾಳ):ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೈದ್ಯಕೀಯ ವಲಯದ ಗಮನ ಸೆಳೆದಿದ್ದಾರೆ. ನಗರದ ನಿಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಮಾರು 7 ತಾಸುಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಿಂದಾಗಿ 32 ವರ್ಷದ ಮಹಿಳೆಯ ಪ್ರಾಣ ಉಳಿದಿದೆ.
ಮೇದೋಜೀರಕ ಗ್ರಂಥಿಯಲ್ಲಿ ಗಡ್ಡೆ:ಪೂಜಾ ಗಿರಿ ಎಂಬಾಕೆ ಇಲ್ಲಿನ ಪೂರ್ವ ಮಿಡ್ನಾಪುರ ಜಿಲ್ಲೆಯ ನಿವಾಸಿ. ಮೂರು ತಿಂಗಳಿನಿಂದ ಗಂಭೀರ ಸ್ವರೂಪದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಊಟದ ನಂತರ ಇವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಜನವರಿಯಲ್ಲಿ ನಿಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಂತರ ಆಕೆಯ ಮೇದೋಜೀರಕ ಗ್ರಂಥಿಯಲ್ಲಿ ಗಡ್ಡೆ ಇರುವುದು ತಿಳಿದು ಬಂದಿದೆ. ವಿಪರೀತ ನೋವಿಗೆ ಗಡ್ಡೆಯೇ ಕಾರಣ ಎಂದು ವೈದ್ಯರು ಪತ್ತೆ ಹಚ್ಚಿದ್ದರು.
ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಉತ್ಪಲ್ ಡೇ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲು ಆರಂಭಿಸಲಾಯಿತು. "ಮೇದೋಜೀರಕ ಗ್ರಂಥಿಯಲ್ಲಿ ಮೂರು ಭಾಗಗಳಿವೆ. ಈ ಮಹಿಳೆಯ ಮೇದೋಜೀರಕ ಗ್ರಂಥಿಯಲ್ಲಿನ ಗಡ್ಡೆ ದೇಹದಾದ್ಯಂತ ಪಸರಿಸಿತ್ತು. ರಕ್ತವು ಪಿತ್ತಜನಕಾಂಗದ ಮೂಲಕ ಹೊರಬರುತ್ತಿತ್ತು. ಮಾನವ ದೇಹದಲ್ಲಿ ಈ ರಕ್ತನಾಳದ ಮಹತ್ವ ಅಪಾರ. ಗಡ್ಡೆ ದೊಡ್ಡದಾಗಿ ಬೆಳೆಯಲು ಆರಂಭಿಸಿದೆ. ಇದರ ಪರಿಣಾಮ ಮೇದೋಜೀರಕ ಗ್ರಂಥಿಯನ್ನು ತೆಗೆದುಹಾಕಿದರೆ ಮಾತ್ರ ಮಹಿಳೆ ಬದುಕುಳಿಯಲು ಸಾಧ್ಯವಿತ್ತು" ಎಂದು ಅವರು ತಿಳಿಸಿದರು.
ಎಚ್ಚರಿಕೆ ವಹಿಸಿ ಶಸ್ತ್ರಚಿಕಿತ್ಸೆ:"ಅನೇಕ ಬಾರಿ ಈ ರೀತಿಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯು ಆಪರೇಷನ್ ಟೇಬಲ್ ಮೇಲೆಯೇ ಸಾವಿಗೀಡಾದ ನಿದರ್ಶನವಿದೆ. ಈ ರಕ್ತನಾಳವನ್ನು ಬಹಳ ಎಚ್ಚರಿಕೆಯಿಂದ ಕತ್ತರಿಸಬೇಕಿರುತ್ತದೆ. ಹೀಗಾಗಿಯೇ ಮಹಿಳೆಗೆ ಅತ್ಯಂತ ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು" ಎಂದು ಹೇಳಿದರು.