ನವದೆಹಲಿ:ಅಪ್ರತಿಮ ಧೈರ್ಯಶಾಲಿ ಮರಾಠ ರಾಜ ಛತ್ರಪತಿ ಶಿವಾಜಿ ಅವರು ಅಫ್ಜಲ್ ಖಾನ್‌ನನ್ನು ಸೋಲಿಸಲು ಬಳಸಿದ್ದ 'ವಾಘ್ ನಖ್' ಇಂಗ್ಲೆಂಡ್ ದೇಶದಿಂದ ಭಾರತಕ್ಕೆ ಮರಳಿ ಬರಲಿದೆ. ಹೀಗೆಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಶನಿವಾರ ತನ್ನ X ಖಾತೆಯಲ್ಲಿ 'ಶಿವಾಜಿಗೆ ಸಂಬಂಧಿಸಿದ ಅಪರೂಪದ ಕಲಾಕೃತಿಯನ್ನು ಯುಕೆಯಿಂದ ಸ್ವದೇಶಕ್ಕೆ ತರಲು ನಿರ್ಧರಿಸಲಾಗಿದೆ' ಎಂದು ಪೋಸ್ಟ್ ಹಾಕಿದೆ.
"ನಮ್ಮ ಅಮೂಲ್ಯವಾದ ಕಲಾಕೃತಿಗಳನ್ನು ಸ್ವದೇಶಕ್ಕೆ ಹಿಂದಿರುಗಿಸುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ದೊಡ್ಡ ಗೆಲುವು" ಎಂದು ಬಣ್ಣಿಸಿದೆ. ಶನಿವಾರ ದೆಹಲಿಯಲ್ಲಿ ಆರಂಭವಾದ ಜಿ20 ನಾಯಕರ ಶೃಂಗಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. "ನಮ್ಮ ಐತಿಹಾಸಿಕ ಅದ್ಭುತ ಪರಂಪರೆ ಮರಳುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ 'ವಾಘ್ ನಖ್' ತನ್ನ ಮೂಲ ಸ್ಥಾನಕ್ಕೆ ಮರಳಲು ಸಿದ್ಧವಾಗಿದೆ" ಎಂದು ಪೋಸ್ಟ್ನಲ್ಲಿ ಹೇಳಿದೆ.
ಇದರ ಜತೆಗೆ #CultureUnitesAll ಮತ್ತು #G20India ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಹಂಚಿಕೊಂಡಿದೆ. ಸಚಿವಾಲಯವು, "ಭಾರತವು ತನ್ನ ಇತಿಹಾಸವನ್ನು ಮರುಪಡೆಯುತ್ತದೆ" ಎಂಬ ಅಡಿಬರಹ ಹೊಂದಿರುವ ಪೋಸ್ಟರ್ ಪ್ರಕಟಿಸಿದೆ. ಪೋಸ್ಟರ್‌ನಲ್ಲಿ 'ವಾಘ್ ನಖ್' ಅನ್ನು "ಅಫ್ಜಲ್ ಖಾನ್‌ನನ್ನು ಸೋಲಿಸಲು ಬಳಸಿದ ಅಸ್ತ್ರ" ಎಂದು ಉಲ್ಲೇಖಿಸಿದೆ.
ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ಸೋಲಿಸಲು ಬಳಸಿದ್ದ ಹುಲಿ ಉಗುರಿನ ಆಕಾರದ ಆಯುಧವನ್ನು ಬ್ರಿಟನ್ನಿಂದ ವಾಪಸ್ ಮಹಾರಾಷ್ಟ್ರಕ್ಕೆ ತರುವ ಬಗ್ಗೆ ರಾಜ್ಯ ಸರ್ಕಾರ ಬ್ರಿಟನ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಒಪ್ಪಂದಕ್ಕೆ ಸಚಿವ ಮುಂಗಂತಿವಾರ್ ಅಕ್ಟೋಬರ್ ಆರಂಭದಲ್ಲಿ ಬ್ರಿಟನ್ಗೆ ತೆರಳಿ ಸಹಿ ಹಾಕಲಿದ್ದಾರೆ. ಸದ್ಯ ವಾಘ್ ನಘ್ ಕಠಾರಿಯನ್ನು ಬ್ರಿಟನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
"ವಾಘ್ ನಖ್ ಅನ್ನು ಮಹಾರಾಷ್ಟ್ರಕ್ಕೆ ಹಿಂತಿರುಗಿಸಲು ಬ್ರಿಟನ್ ಒಪ್ಪಿಕೊಂಡಿದ್ದು, ಹಿಂದೂ ಕ್ಯಾಲೆಂಡರ್ ಆಧಾರದಲ್ಲಿ ಶಿವಾಜಿ ಅಫ್ಜಲ್ ಖಾನ್‌ನನ್ನು ಕೊಂದ ದಿನದ ವಾರ್ಷಿಕೋತ್ಸವಕ್ಕೆ ಅದನ್ನು ಮರಳಿ ಪಡೆಯಲು ಚಿಂತಿಸುತ್ತಿದ್ದೇವೆ. ಗ್ರೆಗೋರಿಯನ್ ಕ್ಯಾಲೆಂಡರ್ ಆಧಾರದಡಿ ಶಿವಾಜಿ ಅಫ್ಜಲ್ ಖಾನ್‌ನನ್ನು ಹತ್ಯೆ ಮಾಡಿದ ದಿನಾಂಕ ನವೆಂಬರ್ 10. ಆದರೆ, ನಾವು ಹಿಂದೂ ಕ್ಯಾಲೆಂಡರ್ ಆಧರಿಸಿ ದಿನಾಂಕಗಳನ್ನು ರೂಪಿಸುತ್ತಿದ್ದೇವೆ. ಇಲ್ಲವಾದಲ್ಲಿ ಇತರ ಕೆಲವು ದಿನಾಂಕಗಳನ್ನು ಕೂಡ ಪರಿಗಣಿಸಲಾಗುತ್ತಿದೆ. ಅದರ ಜೊತೆಗೆ, ವಾಘ್ ನಖ್ ಅನ್ನು ಹಿಂದಕ್ಕೆ ತರುವ ವಿಧಾನಗಳನ್ನು ಕೂಡ ರೂಪಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಸಿದ್ಧ ವಾಘ್ ನಖ್ ಅಕ್ಟೋಬರ್ನಲ್ಲಿಯೇ ಮಹಾರಾಷ್ಟ್ರಕ್ಕೆ ಬರಬಹುದು" ಎಂದು ಸಚಿವ ಮುಂಗಂತಿವಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಲಂಡನ್ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ ಛತ್ರಪತಿ ಶಿವಾಜಿಯ 'ವಾಘ್ ನಖ್': ಹಿಂತಿರುಗಿಸಲು ಒಪ್ಪಿದ ಬ್ರಿಟನ್ ಸರ್ಕಾರ