ಕಾನ್ಪುರ (ಉತ್ತರ ಪ್ರದೇಶ):ಅಳಿವಿನ ಅಂಚಿನಲ್ಲಿರುವ, 6 ಅಡಿ ಉದ್ದದ ಬಲವಾದ ರೆಕ್ಕೆಗಳನ್ನು ಹೊಂದಿರುವ ಹಿಮಾಲಯನ್ ಗ್ರಿಫನ್ ರಣಹದ್ದು ಉತ್ತರಪ್ರದೇಶದಲ್ಲಿ ಸೆರೆ ಸಿಕ್ಕಿದೆ. ಹಿಮಾಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಹದ್ದನ್ನು ಇಲ್ಲಿನ ಜನರು ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದಾರೆ. ದೊಡ್ಡ ರೆಕ್ಕೆ, ದೇಹಗಾತ್ರ ಹೊಂದಿರುವ ರಣಹದ್ದನ್ನು ಕಂಡು ಜನರು ಚಕಿತರಾಗಿದ್ದಾರೆ.
ಹಿಮಾಲಯದ ಅತಿದೊಡ್ಡ ಪಕ್ಷಿ ಪ್ರಬೇಧಗಳಲ್ಲಿ ಒಂದಾದ ಗ್ರಿಫನ್ ರಣಹದ್ದು ಕಾನ್ಪುರದಲ್ಲಿ ಒಂದು ವಾರದಿಂದ ಹಾರಾಡುತ್ತಿದ್ದು, ದೊಡ್ಡ ಗಾತ್ರದ ಪಕ್ಷಿಯು ಜನರಲ್ಲಿ ಕುತೂಹಲ ಮೂಡಿಸಿತ್ತು. ಇಲ್ಲಿನ ಸ್ಮಶಾನದಲ್ಲಿ ಮೃತದೇಹವನ್ನು ತಿನ್ನುತ್ತಿದ್ದಾಗ ಜನರು ಬಲೆ ಬೀಸಿ ಹಿಡಿದಿದ್ದಾರೆ. ಈ ವೇಳೆ ಹದ್ದು ಯಾವುದೇ ಪ್ರತಿರೋಧ ತೋರಿಲ್ಲ. ದೊಡ್ಡ ರೆಕ್ಕೆಗಳನ್ನು ಬಿಡಿಸಿದ ಜನರು ಅದರ ಜೊತೆಗೆ ಫೋಟೋ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.
'ಗ್ರಿಫನ್ ರಣಹದ್ದು 6 ಅಡಿಗಿಂತ ದೊಡ್ಡದಾದ ರೆಕ್ಕೆಗಳನ್ನು ಹೊಂದಿದೆ. ಹಿಮಾಲಯದಲ್ಲಿ ಕಂಡುಬರುವ ಅತಿದೊಡ್ಡ ಪಕ್ಷಿ ಪ್ರಭೇದ ಇದಾಗಿದೆ. ಈಗ ಇವುಗಳು ಬಹುತೇಕ ಅಪಾಯದ ಅಂಚಿನಲ್ಲಿವೆ. ಪರಿಸರ 'ವ್ಯವಸ್ಥೆಯ ಎಂಜಿನಿಯರ್‌ಗಳು' ಎಂಬ ಉಪನಾಮ ಹದ್ದುಗಳಿಗಿದೆ' ಎಂದು ಎಂದು ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ತಿಳಿಸಿದರು.
ಕಳೆದ ವರ್ಷ ಗ್ರಿಫನ್ ರಣಹದ್ದನ್ನು ಸಂರಕ್ಷಿಸಿದ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕಸ್ವಾನ್ ಅವರು, 'ಉತ್ತರಪ್ರದೇಶದಲ್ಲಿ ಸಿಕ್ಕಿರುವ ಈ ಹದ್ದು ಕೂಡ ಹಿಮಾಲಯನ್ ಗ್ರಿಫನ್ ತಳಿಯದ್ದಾಗಿದೆ. ಇದೊಂದು ಅಪರೂಪದ ಪಕ್ಷಿಯಾಗಿದ್ದು, ವಯಸ್ಕ ಹದ್ದುಗಳು ಬೇರೆಡೆಗೆ ವಲಸೆ ಹೋಗುತ್ತವೆ. ಉಳಿದವು ಇಲ್ಲಿಯೇ ಎತ್ತರದ ಪ್ರದೇಶದಲ್ಲಿ ಹಾರಾಟ ನಡೆಸುತ್ತವೆ. ಇವುಗಳು 40 ರಿಂದ 45 ವರ್ಷಗಳವರೆಗೆ ಬದುಕಬಲ್ಲವು' ಎಂದು ಮಾಹಿತಿ ನೀಡಿದರು.