ಶಹಜಹಾನ್‌ಪುರ(ಉತ್ತರ ಪ್ರದೇಶ):ಸುಮಾರು 28 ವರ್ಷಗಳ ನಂತರ ಇಬ್ಬರು ಸಹೋದರರ ಮೇಲೆ ಅತ್ಯಾಚಾರ ದೂರು ದಾಖಲಾಗಿ, ಅತ್ಯಾಚಾರ ಪ್ರಕರಣ ಸಾಬೀತಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಬೆಳಕಿಗೆ ಬಂದಿದೆ. ಸುಮಾರು 2 ವರ್ಷಗಳ ಕಾಲ ಇಬ್ಬರು ಸಹೋದರರಿಂದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಈಗ ಆರೋಪ ಸಾಬೀತಾಗಿದೆ.
ಶಹಜಹಾನ್‌ಪುರದಲ್ಲಿ 1994ರಿಂದ 1996ರವರೆಗೆ ಸುಮಾರು 2 ವರ್ಷಗಳ ಕಾಲ ಇಬ್ಬರು ಸಹೋದರರು ನೆರೆ ಮನೆಯ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ಗರ್ಭಿಣಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಯಾವುದೇ ದೂರು ದಾಖಲಿಸದಂತೆ ಆರೋಪಿಗಳು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಆ ಮಗುವನ್ನು ತಮಗೇ ಕೊಟ್ಟು ಬಿಡಲು ಆರೋಪಿಗಳು ಒತ್ತಾಯಿಸಿದ್ದರು. ನಂತರ ಆ ಮಗುವನ್ನು ಉತ್ತರ ಪ್ರದೇಶದ ದಂಪತಿ ದತ್ತು ತೆಗೆದುಕೊಂಡಿದ್ದರು.