ಜೈಪುರ(ರಾಜಸ್ಥಾನ): ಅತ್ಯಾಚಾರ ಸಂತ್ರಸ್ತೆ ಮೇಲೆ ಬೆಂಕಿ ಹಚ್ಚಿರುವ ಘಟನೆ ರಾಜಸ್ಥಾನದ ಹನುಮನ್ಗಢದಲ್ಲಿ ನಡೆದಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜಸ್ಥಾನದ ಹನುಮನ್ಗಢ ಜಿಲ್ಲೆಯ 33 ವರ್ಷದ ಮಹಿಳೆ ಮೇಲೆ ದುಷ್ಕೃತ್ಯವೆಸಗಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಇದೀಗ ಬಿಕಾನೆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2018ರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರದೀಪ್ ವಿಷ್ಣೋಯ್ ಅವರನ್ನ ವಿಚಾರಣೆಗೋಸ್ಕರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅಂಬಾನಿ ಮನೆ ಬಳಿ ಸ್ಫೋಟಕವಿದ್ದ ವಾಹನ ಪ್ರಕರಣ: ಕಾರು ಮಾಲೀಕನ ಮೃತದೇಹ ಪತ್ತೆ
ಗಂಡನೊಂದಿಗೆ ವೈಮನಸ್ಸು ಉಂಟಾಗಿದ್ದ ಕಾರಣ ಮಹಿಳೆ ತನ್ನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮುಂಜಾನೆ ವ್ಯಕ್ತಿಯೋರ್ವ ಆಕೆ ವಾಸವಾಗಿದ್ದ ಮನೆಗೆ ನುಗ್ಗಿದ್ದು, ಮನೆಯ ಮುಂದಿನ ಜಾಗದಲ್ಲಿ ಸೀಮೆಎಣ್ಣೆ ಸುರಿದು ಮಹಿಳೆಯನ್ನು ಹೊರಗೆ ಕರೆದಿದ್ದಾನೆ. ಬಾಗಿಲು ತೆರೆದು ಹೊರಗಡೆ ಬರುತ್ತಿದ್ದಂತೆ ಆಕೆಯನ್ನು ನೆಲದ ಮೇಲೆ ಬೀಳಿಸಿ ಬೆಂಕಿ ಹಚ್ಚಿದ್ದಾನೆ. ವಿಷ್ಣೋಯ್ ಈ ಕೃತ್ಯವೆಸಗಿದ್ದಾನೆಂದು ಸಂತ್ರಸ್ತೆ ತಾಯಿ ಹೇಳಿದ್ದು, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದಾರೆ.
2018ರಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದ್ದಾಗಿ ಆಕೆ ಈಗಾಗಲೇ ವಿಷ್ಣೋಯ್ ಮೇಲೆ 2018ರಲ್ಲೇ ಪ್ರಕರಣ ದಾಖಲು ಮಾಡಿದ್ದು, ಅದರ ವಿಚಾರಣೆ ನಡೆಯುತ್ತಿದೆ.