ನಾಗಪುರ :ನಗರದ ಜಾರಿಪಟ್ಕ ಮತ್ತು ಕಪಿಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಬಾಲಕಿಯರ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಪೋಕ್ಸೋ ಕೇಸಿನಡಿ ಎರಡೂ ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕನಿಂದ ಪಕ್ಕದ ಮನೆಯ ಬಾಲಕಿ ಮೇಲೆ ಲೈಂಗಿಕ ಕಿರುಕುಳ : 24ರ ಹರೆಯದ ಯುವಕನೊಬ್ಬ 12ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಾರಿಪಟ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ನೀಲೇಶ್ ಲಿಂಬಾಡೆ ಪಕ್ಕದ ಮನೆಯ 12 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಆರೋಪಿ ಬಾಲಕಿಯನ್ನು ವಿವಿಧ ಆಮಿಷಗಳ ಮೂಲಕ ತನ್ನ ಬಲೆಗೆ ಬೀಳಿಸಿದ್ದ. ಆರೋಪಿ ಎರಡು ದಿನಗಳ ಹಿಂದೆ ಬಾಲಕಿಯನ್ನು ತನ್ನ ಮನೆಗೆ ಕರೆಸಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಜೊತೆಗೆ ಈ ಬಗ್ಗೆ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ, ಬಾಲಕಿಯು ತನ್ನ ಪೋಷಕರಲ್ಲಿ ನಡೆದಿದ್ದನ್ನೆಲ್ಲ ತಿಳಿಸಿದ್ದಾಳೆ. ಬಳಿಕ ಬಾಲಕಿಯ ಪೋಷಕರು ಜಾರಿಪಟ್ಕ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ನೀಲೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.