ಸಿವಾನ್:ಬಿಹಾರದ ಸಿವಾನ್‌ನಲ್ಲಿ ಮಹಿಳಾ ಫುಟ್‌ಬಾಲ್ ಆಟಗಾರ್ತಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ದೇಶ ವಿದೇಶಗಳಲ್ಲಿ ಫುಟ್ಬಾಲ್ ಆಡುವ ಮೂಲಕ ದೇಶಕ್ಕೆ ಗೌರವ ತಂದಿರುವ ಈ ಮಹಿಳಾ ಆಟಗಾರ್ತಿಯ ಮೇಲೆ ಅತ್ಯಾಚಾರ ಯತ್ನ ನಡೆದಿರುವುದು ಕಳವಳ ಮೂಡಿಸಿದೆ. ಸಂತ್ರಸ್ತೆ ಮೈರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ. ಇವರು ಸಿವಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದು, ಯುವಕನೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ದೂರಿನಲ್ಲೇನಿದೆ?: ಸೋಮವಾರ ಸಂಜೆ ಎಂದಿನಂತೆ ಗ್ರಾಮದಲ್ಲಿ ವಾಕಿಂಗ್‌ಗೆ ಹೋಗಿದ್ದೆ ಎಂದು ಮಹಿಳಾ ಫುಟ್‌ಬಾಲ್ ಆಟಗಾರ್ತಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮದ ಯುವಕನೊಬ್ಬ ನನ್ನನ್ನು ಹಿಡಿದು ಹೊಲಕ್ಕೆ ಎಳೆದೊಯ್ದಿದ್ದಾನೆ. ನೀನೇನು ಬಹಳ ದೊಡ್ಡ ಆಟಗಾರ್ತಿಯಾ ಎಂದು ಬೈಯುತ್ತ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ. ನಾನು ಜೋರಾಗಿ ಅಳಲು ಪ್ರಾರಂಭಿಸಿದೆ. ಆರೋಪಿ ನನ್ನ ಮೇಲೆ ಹಲ್ಲೆ ನಡೆಸಿದ. ಸುತ್ತಮುತ್ತ ಜನರು ಬರುತ್ತಿರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದು, ಆತ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಫುಟಬಾಲ್ ಆಟಗಾರ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಸಿವಾನ್ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಕ್ರಮದ ಭರವಸೆ ನೀಡಿದ್ದಾರೆ. ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇದ್ದು ಈ ಫುಟ್ಬಾಲ್ ಆಟಗಾರ್ತಿ ಕ್ರೀಡಾ ತರಬೇತಿ ಪಡೆದಿದ್ದಾರೆ. 2022 ರಲ್ಲಿ ಅಮೆರಿಕದಲ್ಲಿ ನಡೆದ ಯುನಿಫೈಡ್ ಒಲಂಪಿಕ್ನಲ್ಲಿ ಈಕೆ ಭಾಗವಹಿಸಿದ್ದರು. ಇದರಲ್ಲಿ ಕಂಚಿನ ಪದಕ ಗೆದ್ದಿದ್ದರು. ಬಿಹಾರ, ಒಡಿಶಾ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಇವರು ಆಡಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು ಈತನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.