ಮಧ್ಯಪ್ರದೇಶ: ರಾಜ್ಯದ ದಾಮೋಹ್ ಎಂಬ ಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಅಮಾನವೀಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಆರೋಪಿಯನ್ನು ಬಂಧಿಸಿರುವುದಾಗಿ ಇಲ್ಲಿನ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಈ ಹಿಂದೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಆರೋಪಿ ಕೌಶಲ್ ಕಿಶೋರ್ ಚೌಬೆಯನ್ನೂ ಸಹ ಬಂಧಿಸಲಾಗಿದೆ. ಅಷ್ಟೇ ಅಲ್ಲ, ಬಂಧಿತ ವ್ಯಕ್ತಿ ಅತಿಕ್ರಮಗೊಳಿಸಿದ್ದ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದು ಮಾಡಿ ಅಲ್ಲಿ ಆತ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ರಾಣೆಹ್ ಪೊಲೀಸ್ ಠಾಣೆಯ ಪ್ರಭಾರಿ, ದಾಮೋಹ್ ಪಿ.ಕುರ್ಮಿ ಮಾಹಿತಿ ನೀಡಿದರು. ಆರೋಪಿಯ ಮನೆಯನ್ನು ಮಹಿಳಾ ಪೊಲೀಸರೇ ಸ್ವತಃ ಬಲ್ಡೋಜರ್ ಚಲಾಯಿಸಿ ಕೆಡವಿದ್ದು ವಿಶೇಷವಾಗಿತ್ತು.
ಈ ಹಿಂದೆ, 2022ರ ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರಿಗಳು ರೇವಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳ ಅಕ್ರಮ ಕಟ್ಟಡಗಳನ್ನು ಕೆಡವಿ ಹಾಕಿದ್ದರು. ರೇವಾ ಜಿಲ್ಲೆಯಲ್ಲಿ ಸೆಪ್ಟೆಂಬರ್ 16ರಂದು ಪ್ರಸಿದ್ಧ ಅಷ್ಟಭುಜಿ ದೇವಸ್ಥಾನದ ಸಮೀಪ ಬಾಲಕಿಯೊಬ್ಬಳ ಮೇಲೆ ಆರು ಮಂದಿ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ತನ್ನ ಸ್ನೇಹಿತೆಯೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಾಗ ಆರೋಪಿಗಳು ದುಷ್ಕೃತ್ಯ ಎಸಗಿದ್ದರು. ಅಲ್ಲದೇ ಆಕೆಯ ಸ್ನೇಹಿತೆಗೆ ಥಳಿಸಿ ಮೊಬೈಲ್ ಕಸಿದುಕೊಂಡಿದ್ದರು. ಮತ್ತೊಂದು ಪ್ರಕರಣದಲ್ಲಿ, 28 ವರ್ಷದ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಮಾರ್ಚ್ ತಿಂಗಳಲ್ಲಿ ಶಾಹದೋಲ್ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿಯ ಮನೆಯನ್ನೂ ನೆಲಸಮ ಮಾಡಲಾಗಿತ್ತು. ರಾಜ್ಯದಲ್ಲಿ ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ವಿರುದ್ಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.