ಚಂಡೀಗಢ (ಪಂಜಾಬ್): ಉಕ್ಕಿ ಹರಿಯುತ್ತಿರುವ ಸಟ್ಲೆಜ್ ನದಿ ನೀರಿನಲ್ಲಿ ಪಂಜಾಬ್‌ನ ಇಬ್ಬರು ಕೊಚ್ಚಿಕೊಂಡು ಹೋಗಿ ಪಾಕಿಸ್ತಾನಕ್ಕೆ ತಲುಪಿದ್ದಾರೆ. ಈ ಇಬ್ಬರನ್ನು ಪಾಕಿಸ್ತಾನದ ರೇಂಜರ್‌ಗಳು (ಸೈನಿಕರು) ಬಂಧಿಸಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಲೂಧಿಯಾನದ ಸಿಧ್ವಾನ್ ಬೆಟ್ ಗ್ರಾಮದ ರತನ್‌ಪಾಲ್ ಸಿಂಗ್ ಮತ್ತು ಹವೀಂದರ್ ಸಿಂಗ್ ಎಂಬುವವರೇ ಕೊಚ್ಚಿ ಹೋದವರು ಎಂದು ತಿಳಿದು ಬಂದಿದೆ.
ರತನ್‌ಪಾಲ್ ಸಿಂಗ್ ಹಾಗೂ ಹವೀಂದರ್ ಸಿಂಗ್ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ಶನಿವಾರ ಬಂಧಿಸಿದ್ದಾರೆ. ಈ ಕುರಿತು ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗೂ ಮಾಹಿತಿ ನೀಡಲಾಗಿದೆ. ಇಬ್ಬರನ್ನೂ ಬಿಎಸ್‌ಎಫ್‌ಗೆ ಪಾಕಿಸ್ತಾನ ಹಸ್ತಾಂತರಿಸುವುದನ್ನು ಕಾಯುತ್ತಿದ್ದೇವೆ. ಇಬ್ಬರು ತವರು ನೆಲಕ್ಕೆ ಮರಳಿದ ನಂತರವಷ್ಟೇ ಅವರು ಪಾಕಿಸ್ತಾನಕ್ಕೆ ದಾಟಲು ನಿಖರವಾದ ಕಾರಣವನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಕಿವಿ ಕೇಳಿಸದ ಭಾರತದ ವ್ಯಕ್ತಿಯೊಬ್ಬರು ಸಹ ಸಟ್ಲೆಜ್ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಪಾಕಿಸ್ತಾನಕ್ಕೆ ತಲುಪಿದ್ದು ವರದಿಯಾಗಿತ್ತು. ಈ ವ್ಯಕ್ತಿಯನ್ನು ಗುಪ್ತಚರ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದರು.
ಈ ವ್ಯಕ್ತಿಯನ್ನು 50 ವರ್ಷದ ಗಂಡಾ ಸಿಂಗ್ ವಾಲಾ ಎಂದು ಗುರುತಿಸಲಾಗಿತ್ತು. ಭಾರತೀಯ ಪ್ರಜೆಯಾದ ಈ ವ್ಯಕ್ತಿ ಕಿವುಡ ಮತ್ತು ಸನ್ನೆ ಭಾಷೆಯ ಮೂಲಕ ಸಂವಹನ ನಡೆಸುತ್ತಾನೆ. ಆತ ಹಿಂದೂ ಎಂದು ಹೇಳಿದ್ದು, ಸಟ್ಲೆಜ್ ನದಿಯ ಪ್ರವಾಹದ ನೀರಿನಲ್ಲಿ ಪಾಕಿಸ್ತಾನಕ್ಕೆ ನುಗ್ಗಿದ್ದಾನೆ. ವೈದ್ಯಕೀಯ ಪರೀಕ್ಷೆಯ ನಂತರ ಆ ವ್ಯಕ್ತಿಯನ್ನು ತನಿಖೆಗಾಗಿ ಗುಪ್ತಚರ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಸಟ್ಲೆಜ್ ನದಿ, ಸಿಂಧೂ, ರಾವಿ ನದಿ ಮತ್ತು ಬಿಯಾಸ್ ನದಿಗಳು ಭಾರತ-ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ಹರಿಯುತ್ತವೆ. ಸಟ್ಲೆಜ್ ನದಿಯು ಉತ್ತರ ಭಾರತ ಮತ್ತು ಪಾಕಿಸ್ತಾನದ ಗಡಿಯಾಚೆಗಿನ ಪ್ರದೇಶದಲ್ಲಿ ಪಂಜಾಬ್ ಮೂಲಕ ಹರಿಯುವ ಐದು ನದಿಗಳ ಪೈಕಿ ಅತಿ ಉದ್ದವಾಗಿದೆ. ಈ ನದಿಯು ಪಶ್ಚಿಮ ಟಿಬೆಟ್‌ನಲ್ಲಿ ಪ್ರಾರಂಭವಾಗುತ್ತದೆ. ಕಾಶ್ಮೀರದ ಲಡಾಖ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳ ಮೂಲಕ ವಾಯುವ್ಯಕ್ಕೆ ಹರಿಯುತ್ತದೆ. ನಂತರ ಕರಾಚಿಯ ಬಂದರಿನ ಬಳಿ ಅರಬ್ಬಿ ಸಮುದ್ರಕ್ಕೆ ಪಾಕಿಸ್ತಾನದ ಮೂಲಕ ದಕ್ಷಿಣದಿಂದ ನೈಋತ್ಯಕ್ಕೆ ಹರಿಯುತ್ತದೆ.
ಇತ್ತೀಚೆಗೆ ಪಂಜಾಬ್ ಸೇರಿ ಉತ್ತರ ಭಾರತದ ಹಲವೆಡೆ ಭಾರಿ ಮಳೆಯಾಗಿದೆ. ಮತ್ತೊಂದೆಡೆ, ಕಳೆದ ಎರಡು ವಾರಗಳಿಂದ ಪಾಕಿಸ್ತಾನದಲ್ಲೂ ಭಾರಿ ಮಳೆ ಸುರಿಯುತ್ತಿದೆ. ಪಾಕಿಸ್ತಾನದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಇದುವರೆಗೆ ಎಂಟು ಮಕ್ಕಳು ಸೇರಿದಂತೆ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:Punjab Flood: ನಿರಂತರ ಮಳೆ, ತುಂಬಿ ಹರಿಯುತ್ತಿರುವ ನದಿಗಳು.. ಪ್ರವಾಹದಲ್ಲಿ ಮುಳುಗಿದ 500ಕ್ಕೂ ಹೆಚ್ಚು ಹಳ್ಳಿಗಳು!