ನಾಗ್ಪುರ್(ಮಹಾರಾಷ್ಟ್ರ):ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಣೆ ಮಾಡಿ, ಬಂಧನಕ್ಕೊಳಗಾಗಿ ನಂತರ ಜಾಮೀನು ಮೇಲೆ ಹೊರಬಂದಿರುವ ರಾಣಾ ದಂಪತಿ ಇದೀಗ ಸ್ಥಳೀಯ ದೇವಸ್ಥಾನವೊಂದರಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ನಾಗ್ಪುರದ ಸ್ಥಳೀಯ ದೇವಸ್ಥಾನವೊಂದರಲ್ಲಿ ರಾಣಾ ದಂಪತಿ ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. ಸಂಸದೆ ನವನೀತ್ ಕೌರ್ ಹಾಗೂ ಶಾಸಕ ರವಿ ರಾಣಾ ದೆಹಲಿಯಿಂದ ನಾಗ್ಪುರಕ್ಕೆ ಇಂದು ವಾಪಸ್ ಆಗಿದ್ದರು.
ಮುಂಬೈನ ಬಾಂದ್ರಾದಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಖಾಸಗಿ ನಿವಾಸ 'ಮಾತೋಶ್ರೀ' ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ರಾಣಾ ದಂಪತಿ ಘೋಷಣೆ ಮಾಡಿದ್ದರು. ಹೀಗಾಗಿ, ಅವರನ್ನ ಏಪ್ರಿಲ್ 23 ರಂದು ಬಂಧಿಸಲಾಗಿತ್ತು. ಇದಾದ ಬಳಿಕ ಮೇ 4ರಂದು ದಂಪತಿ ಜಾಮೀನು ಪಡೆದು ಹೊರಬಂದಿದ್ದರು.
ಹನುಮಾನ್ ಚಾಲೀಸಾ ಪಠಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದೆ ನವನೀತ್ ರಾಣಾ, ಸ್ಥಳೀಯ ದೇವಸ್ಥಾನವೊಂದರಲ್ಲಿ ಹನುಮಾನ್ ಚಾಲೀಸಾ ಪಠಿಸಿ, ಆರತಿ ಮಾಡಲಾಗಿದೆ. ರಾಜ್ಯಕ್ಕೆ ಹತ್ತಿಕೊಂಡಿರುವ ಶಾಪ ತೊಲಗುವಂತೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.