ಹೈದರಾಬಾದ್(ತೆಲಂಗಾಣ):ರಾಮೋಜಿ ಫಿಲ್ಮ್ ಸಿಟಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಅಟ್ಲೂರಿ ರಾಮಮೋಹನ್ ರಾವ್ (87) ಅವರು ಅನಾರೋಗ್ಯದಿಂದ ಇಂದು (ಶನಿವಾರ) ಇಹಲೋಕ ತ್ಯಜಿಸಿದ್ದು, ಪಾರ್ಥಿವ ಶರೀರಕ್ಕೆ ರಾಮೋಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರಾಮೋಜಿ ರಾವ್ ಶ್ರದ್ಧಾಂಜಲಿ ಸಲ್ಲಿಸಿದರು.
ಅಟ್ಲೂರಿ ರಾಮಮೋಹನ್ ರಾವ್ ಅವರು ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಮಧ್ಯಾಹ್ನದ ವೇಳೆ ನಿಧನರಾದರು. ಬಳಿಕ ಅವರ ಪಾರ್ಥಿವ ಶರೀರವನ್ನು ಜುಬಿಲಿ ಹಿಲ್ಸ್‌ನಲ್ಲಿರುವ ನಿವಾಸಕ್ಕೆ ತರಲಾಯಿತು. ನಾಳೆ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಸಂಬಂಧಿಕರು, ಸ್ನೇಹಿತರು, ಹಿತೈಸಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ರಾಮೋಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ರಾಮೋಜಿ ರಾವ್ ಅವರು ಅಗಲಿದ ಗೆಳೆಯನ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು, ರಾವ್ ಅವರ ಹಿರಿಯ ಸಹೋದ್ಯೋಗಿಗಳು ಕೂಡ ಭೇಟಿ ನೀಡಿ ನಮನ ಸಲ್ಲಿಸಿದರು.